ರಾಜ್ಯ ಸರ್ಕಾರ ರಸಗೊಬ್ಬರ ಬೆಲೆ ಇಳಿಕೆ ಮಾಡಬೇಕು: ಪ್ರಿಯಾಂಕ್ ಖರ್ಗೆ ಒತ್ತಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲಬುರ್ಗಿ: ಕೊರೋನಾ ಲಾಕ್‌ಡೌನ್ ಸಂಕಷ್ಟದಿಂದ ರೈತರು ಬೆಳೆದ ಉತ್ಪನ್ನಗಳ ಬೆಲೆ ಕುಸಿದು, ಹಣ್ಣು ತರಕಾರಿಗಳನ್ನು ಬೀದಿ ಬೀದಿಗಳಲ್ಲಿ ಸುರಿಯತ್ತಿದ್ದಾರೆ. ಖರೀದಿದಾದರು, ಮಾರುಕಟ್ಟೆ ಸೌಲಭ್ಯ ದೊರಕದ ಕಾರಣ ಕೆಲವು ರೈತರು ತಮ್ಮ ಬೆಳೆಗಳ ಕಟಾವು ಮಾಡದೇ, ಹೊಲದಲ್ಲಿಯೇ ಬಿಟ್ಟಿದ್ದಾರೆ‌. ಇಂತಹ ಸಂದರ್ಭದಲ್ಲಿ ರಸಗೊಬ್ಬರ ಬೆಲೆಯನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರವು ರಸಗೊಬ್ಬರ ಸಬ್ಸಿಡಿಯನ್ನು 1.30 ಲಕ್ಷ ಕೋಟಿಯಿಂದ 54 ಸಾವಿರ ಕೋಟಿಗೆ ಇಳಿಕೆ ಮಾಡಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ. ಯೂರಿಯೇತರ ರಸಗೊಬ್ಬರಗಳ ಉತ್ಪಾದಕ ಕಂಪನಿಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕಿರುವುದರಿಂದ ತಮಗಿಷ್ಟ ಬಂದ ರೀತಿಯಲ್ಲಿ ಕಂಪನಿಗಳು ಬೆಲೆ ಏರಿಕೆ ಮಾಡಿ ರೈತರನ್ನು ಶೋಷಣೆ ಮಾಡುತ್ತವೆ. ರೈತ ಪರವಾದ ಸರ್ಕಾರವೆಂದು ಹೇಳಿಕೊಳ್ಳುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ರೈತರ ಕುರಿತು ಕಿಂಚಿತ್ತೂ ಕಾಳಜಿಯಿಲ್ಲ ಎಂದು ಕಿಡಿಕಾರಿದ್ದಾರೆ.

ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವ ಉದಾಹರಣೆ ಈವರೆಗೂ ಇರಲಿಲ್ಲ. ಅಬ್ಬಬ್ಬಾ ಎಂದರೆ ಪ್ರತಿ ಚೀಲಕ್ಕೆ 50 ರಿಂದ 100 ರೂ.ಗೆ ಹೆಚ್ಚಳ ಮಾಡುತ್ತಿದ್ದರು. ಆದರೆ, ಇದೇ ಮೊದಲ ಬಾರಿ ಶೇ. 40ಕ್ಕೂ ಅಧಿಕ ಹೆಚ್ಚಳ ಮಾಡಲಾಗಿದೆ.

ಪ್ರತಿ 50 ಕೆ.ಜಿ. ಚೀಲಕ್ಕೆ
•1200 ರೂ. ಇದ್ದ ಡಿಎಪಿ 1900 ರೂ. ಆಗಿದೆ.
• ಎನ್‌ಪಿಕೆ 10.26.26 ರಸಗೊಬ್ಬರ 1175 ರೂ. ಇದ್ದಿದ್ದು 1775 ರೂ.ಗಳಿಗೆ ಏರಿಕೆಯಾಗಿದೆ.
•12.32.16 ರಸಗೊಬ್ಬರ ದರ 1185 ರೂ. ಇದ್ದಿದ್ದು 1800 ರೂ. ಆಗಿದೆ
• 20.20.20 ರಸಗೊಬ್ಬರ 925 ಇದ್ದಿದ್ದು 1350 ರೂ.ಗೆ ಹೆಚ್ಚಳವಾಗಿದೆ.

ಈ ಮೂಲಕ ಬಿಜೆಪಿ ಸರ್ಕಾರ ರೈತರ ತಲೆ ಮೇಲೆ ಚಪ್ಪಡಿ ಎಳೆದಿದೆ. ಸಚಿವರು ರಸಗೊಬ್ಬರ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಸುಳ್ಳು ಹೇಳುವ ಮೂಲಕ ರೈತರನ್ನ ದಾರಿ ತಪ್ಪಿಸಿದ್ದಾರೆ. ಅನ್ನದಾತರು ಎಚ್ಚೆತ್ತುಕೊಂಡು ಸುಳ್ಳು ಹೇಳುವ ಮಂತ್ರಿಗಳ ಮುಖಕ್ಕೆ ಮಂಗಳಾರತಿ ಮಾಡಿ ಸರಿಯಾದ ಪಾಠ ಕಲಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಯವರಿಗೆ ದೇಶದ ರೈತರು, ಕಾರ್ಮಿಕರು, ಬಡವರ ಮೇಲೆ ಯಾವುದೇ ಕಾಳಜಿಯಿಲ್ಲ. ಅವರು ರಸಗೊಬ್ಬರ ಬೆಲೆ ಇಳಿಕೆ ಮಾಡುವ ಮೂಲಕ ರೈತರಿಗೆ ನೆರವಾಗುತ್ತಾರೆ ಎಂಬ ಯಾವ ಭರವಸೆಯೂ ಉಳಿದಿಲ್ಲ. ಆದರೆ, ಹಸಿರು ಶಾಲು ಹೊದ್ದು ತಮ್ಮನ್ನು ತಾವೇ ರೈತ ನಾಯಕನೆಂದು ಬಿಂಬಿಸಿಕೊಳ್ಳುವ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಾದರೂ, ಈ ಕೂಡಲೇ ರಸಗೊಬ್ಬರ ಬೆಲೆ ಇಳಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಪ್ರಿಯಾಂಕ್ ಖರ್ಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು