ರಸಗೊಬ್ಬರದ ಬೆಲೆ ಏರಿಸಿ ರೈತರನ್ನು ಸಾಯಿಸಲು ಪೈಪೋಟಿಗೆ ಇಳಿದಂತಿದೆ: ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೊರೊನಾ ರೋಗದ ಪರಿಣಾಮವಾಗಿ ಜರ್ಜರಿತರಾಗಿರುವ ರೈತರ ನೆರವಿಗೆ ಬರಬೇಕಾಗಿದ್ದ ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಏರಿಸಿ ರೈತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ರೈತರನ್ನು ಸಾಯಿಸಲು ಪೈಪೋಟಿಗೆ ಇಳಿದಂತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಸಗೊಬ್ಬರಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಏಕಾಏಕಿ ಅಂದಾಜು ರೂ.45,000 ಕೋಟಿಯಷ್ಟು ಕಡಿತಗೊಳಿಸಿರುವುದೇ ರಸಗೊಬ್ಬರ ಕಂಪೆನಿಗಳು ಬೆಲೆ ಏರಿಸಲು ಕಾರಣ. ಕೇಂದ್ರ ಸರ್ಕಾರ ಈ ಸತ್ಯವನ್ನು ಮುಚ್ಚಿಟ್ಟು ಸುಳ್ಳು ಕಾರಣಗಳನ್ನು ನೀಡುತ್ತಿದೆ. ಹಳೆಯ ದಾಸ್ತಾನಿನ ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಸೂಚನೆಗೆ ತದ್ವಿರುದ್ಧವಾಗಿ ರಾಜ್ಯ ಕೃಷಿ ಇಲಾಖೆ ಆದೇಶ ಹೊರಡಿಸಿದೆ. ರೈತರ ಹಾದಿ ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಟಕ‌ ಮಾಡುತ್ತಿವೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಆರುವರೆ ಲಕ್ಷ ಮೆ.ಟನ್ ಡಿಎಪಿಗೆ ಬೇಡಿಕೆ ಇದೆ. ಈಗ ಇರುವ ದಾಸ್ತಾನು ಕೇವಲ 77,401 ಮೆ.ಟನ್ ಮಾತ್ರ. ಇದರಿಂದಾಗಿ ಹಳೆದಾಸ್ತಾನಿಗೆ ಹಳೆಯ ದರದ ಸೂಚನೆಯಿಂದ ರೈತರಿಗೆ ಯಾವ ಲಾಭವೂ ಆಗಲಾರದು. ಈಗಾಗಲೇ ರಸಗೊಬ್ಬರ ಕಂಪೆನಿಗಳು ಹೊಸದರದ ರಸಗೊಬ್ಬರವನ್ನು ಮಾರುಕಟ್ಟೆಗೆ ಸುರಿದಿವೆ. ಎಲ್ಲ ರಸಗೊಬ್ಬರಗಳ ಬೆಲೆಯನ್ನು ಸರಾಸರಿ ಶೇಕಡಾ 60ರಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ ಒಂದಕ್ಕೆ ಕ್ವಿಂಟಲ್ ಡಿಎಪಿಗೆ ರೂ.2400ರಷ್ಟಿದ್ದ ಬೆಲೆ ಈಗ ರೂ.3400 ಆಗಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆಂದು ಆಶ್ವಾಸನೆ ನೀಡಿದ್ದ ಪ್ರಧಾನಿ ಮೋದಿ ಅವರು ರಸಗೊಬ್ಬರದ ಬೆಲೆ‌ ದುಪ್ಪಟ್ಟು ಮಾಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೂತನ ಕೃಷಿ ಕಾಯ್ದೆಗಳನ್ನು ದೇಶದಾದ್ಯಂತ ವಿರೋಧಿಸುತ್ತಿರುವ ರೈತರ ವಿರುದ್ಧ ಸೇಡುತೀರಿಸಿಕೊಳ್ಳುವ ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ರಸಗೊಬ್ಬರ ಕಂಪೆನಿಗಳ ಜೊತೆ ಷಾಮೀಲಾಗಿ ರೈತರನ್ನು ಸುಲಿಗೆ ಮಾಡಲು ಹೊರಟಂತಿದೆ.
ಹಳೆ ದಾಸ್ತಾನು, ಹೊಸ ದಾಸ್ತಾನು ಎಂಬ ನಾಟಕವನ್ನು ಕೇಂದ್ರ ಸರ್ಕಾರ ಕೈಬಿಟ್ಟು‌, ರಸಗೊಬ್ಬರಕ್ಕೆ ನೀಡುತ್ತಿರುವ ಸಬ್ಸಿಡಿಯನ್ನು ತಕ್ಷಣ ಹೆಚ್ಚಿಸಿ ಏರಿಸಿರುವ ಬೆಲೆಯನ್ನು ಮೊದಲಿನ ಸ್ಥಿತಿಗೆ ಇಳಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು