ಬೆಂಗಳೂರು: ‘ಸಿಡಿ’ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆಯುತ್ತಿದೆ. ಸಿಡಿ ಹಗರಣ ಗಂಭೀರವಾಗಿ ಪರಿಗಣಿಸಿದ ‘ಕೈ’ ನಾಯಕರು, ಬಿಜೆಪಿಯ ಸಚಿವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ರಾಜಕೀಯ ಇತಿಹಾಸದಲ್ಲೇ ಯಾವ ಸಚಿವರೂ ಹೀಗೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿಲ್ಲ. ಸಿಡಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ, ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೂಡಲೇ 6 ಮಂದಿ ಸಚಿವರೂ ರಾಜೀನಾಮೆ ನೀಡಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ತನಿಖೆ ನಡೆಯಬೇಕು.ಸಿಡಿ ಪ್ರಕರಣದ ಸಂತ್ರಸ್ತ ಯುವತಿ ರಕ್ಷಣೆ ಇಲ್ಲದೇ, ಅವಮಾನ ಸಹಿಸದೇ ತಲೆ ಮರೆಸಿಕೊಂಡಿದ್ದಾರೆ.ಯುವತಿಗೆ ಸೂಕ್ತ ರಕ್ಷಣೆ ಕೊಡಬೇಕು, ಅವರ ವಿಡಿಯೋ ಹೇಳಿಕೆ ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಯುವತಿಯ ವಿಡಿಯೋ ಹೇಳಿಕೆ ಬಿಡುಗಡೆಯಾಗಿ 10 ದಿನಗಳಾದರೂ ಇನ್ನೂ ಎಫ್ಐಆರ್ ದಾಖಲಾಗಿಲ್ಲ ಏಕೆ? ಸರ್ಕಾರ, ರಮೇಶ್ ಜಾರಕಿಹೊಳಿ ಅವರು ಬರೆದ ಪತ್ರದ ಅನ್ವಯ ಎಸ್ಐಟಿ ರಚಿಸಿ, ವಿಚಾರಣೆ ಮಾಡಿ ವರದಿ ನೀಡುವಂತೆ ಹೇಳಿದೆ, ಇದು ತನಿಖೆಯಲ್ಲ.
ನಿಯಮಗಳ ಉಲ್ಲೇಖವಿಲ್ಲ, ಹಾಗಾದರೆ ಆರೋಪ ಪಟ್ಟಿ ಸಲ್ಲಿಸುವುದು ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಕಾಟಾಚಾರಕ್ಕೆ ಎಸ್ಐಟಿ ಮಾಡಿದೆ, ಪ್ರಕರಣ ಮುಚ್ಚಿಹಾಕಲು ಇದೆಲ್ಲ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.