ಬೆಳಗಾವಿ: ಬೆಳಗಾವಿ ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿದ್ದೇವೆ. ಸೇವಾ ಮನೋಭಾವ, ಎಲ್ಲ ವರ್ಗಗಳ ಬಗ್ಗೆ ಅಪಾರ ಕಾಳಜಿ ಇರುವ ಸೌಮ್ಯ ಸ್ವಭಾವದ ಸಜ್ಜನ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇವೆ. ಬೆಳಗಾವಿಯ ಮತದಾರರು ಅವರನ್ನು ಆಶೀರ್ವದಿಸಿ ಸಂಸತ್ತಿಗೆ ಕಳುಹಿಸಿಕೊಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಬೆಳಗಾವಿ ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಇಂದು ಬೆಳಗಾವಿಗೆ ಆಗಮಿಸಿದ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು.
“ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರಿದ್ದರೂ, ಒಂದು ದಿನವೂ ರಾಜ್ಯದ ಪರವಾಗಿ ಅವರು ಧ್ವನಿ ಎತ್ತಲಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನೂ ಕೇಳುತ್ತಿಲ್ಲ. ಅವರಿಂದ ಯಾವುದೇ ಪ್ರಯೋಜನವಿಲ್ಲ. ರಾಜ್ಯದ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಸತೀಶ್ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಕಳುಹಿಸೋಣ” ಎಂದು ಅವರು ಮತದಾರರಿಗೆ ವಿನಂತಿಸಿದರು.
ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಉಪಚುನಾವಣೆ ಎಪ್ರಿಲ್ 17 ರಂದು ನಡೆಯಲಿದೆ. ಬಿಜೆಪಿ ಪಕ್ಷದಿಂದ ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಕಣದಲ್ಲಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಜನಪರ ಚಿಂತಕ, ಎಲ್ಲಾ ವರ್ಗ, ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುವ ಸತೀಶ್ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕೆಂದು ಡಿಕೆಶಿ ಹೇಳಿದರು.
ನಾಳೆ ಬೆಳಗಾವಿ, ಗೋಕಾಕ್ ನಲ್ಲಿ ಚುನಾವಣಾ ಪ್ರಚಾರ ನಡೆಸಲಿರುವ ಡಿಕೆಶಿ ಇಂದು ಸಂಜೆ ಬೆಳಗಾವಿಗೆ ಆಗಮಿಸಿದ್ದರು, ಅವರ ಜೊತೆಗೆ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇದ್ದರು.