ರೈತ ಮುಷ್ಕರ-ಅಲ್ಲಿ ರೈತರೇ ಏಕಿರಬೇಕು ? ಕೃಷಿ ಬಿಕ್ಕಟ್ಟು ಕೇವಲ ರೈತರ ಸಮಸ್ಯೆಯೇ ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ರೈತ ಮುಷ್ಕರ-ಅಲ್ಲಿ ರೈತರೇ ಏಕಿರಬೇಕು ?
ಕೃಷಿ ಬಿಕ್ಕಟ್ಟು ಕೇವಲ ರೈತರ ಸಮಸ್ಯೆಯೇ ?

ನಾ ದಿವಾಕರ, ಹಿರಿಯ ಲೇಖಕರು

ಸಮಕಾಲೀನ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಒಂದು ಸಾರ್ವಜನಿಕ ಮುಷ್ಕರ ದೆಹಲಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ನಡೆಯುತ್ತಿದೆ. ಈ ಮುಷ್ಕರದ ರೂವಾರಿಗಳು ದೇಶದ ರೈತಾಪಿ ಸಮುದಾಯ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂಬ ದೃಢ ನಿರ್ಧಾರದೊಂದಿಗೆ ಲಕ್ಷಾಂತರ ರೈತರು ಕಳೆದ ಹತ್ತು ತಿಂಗಳ ಕಾಲ ಮಳೆ, ಗಾಳಿ, ಚಳಿ ಲೆಕ್ಕಿಸದೆ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಮುಷ್ಕರನಿರತರಾಗಿದ್ದಾರೆ. ಈ ಅವಧಿಯಲ್ಲಿ ಏಳು ನೂರಕ್ಕೂ ಹೆಚ್ಚು ರೈತರು ಮೃತಪಟ್ಟಿರುವುದೂ ವರದಿಯಾಗಿದೆ. ರೈತರ ಬೇಡಿಕೆಗಳು ನ್ಯಾಯಯುತವಾಗಿದೆಯೋ ಇಲ್ಲವೋ ಎಂದು ನಿರ್ಧರಿಸಬೇಕಾದವರು, ಕೃಷಿಯಲ್ಲಿ ತೊಡಗಿರುವ ರೈತರು ಮತ್ತು ಭೂಮಿಯನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ಜನರೇ ಹೊರತು, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತ ಅಧಿಕಾರಶಾಹಿಯಲ್ಲ.

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಚರ್ಚೆಗೂ ಅವಕಾಶ ನೀಡದೆ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ಏಕೆ ರೈತರಿಗೆ ಮಾರಕವಾಗಲಿದೆ ? ಈ ಪ್ರಶ್ನೆಗೆ ಈಗಾಗಲೇ ಕೃಷಿ ತಜ್ಞರು, ಅರ್ಥಶಾಸ್ತ್ರಜ್ಞರು ಸಾಕಷ್ಟು ವ್ಯಾಖ್ಯಾನಗಳನ್ನು ನೀಡಿದ್ದಾಗಿದೆ. ಕೆಲವು ಭಿನ್ನ ನಿಲುವುಗಳ ಹೊರತಾಗಿಯೂ, ಈ ಕಾಯ್ದೆಗಳು ಭೂಮಿಯನ್ನೇ ನಂಬಿ ಬದುಕುವ ಕಟ್ಟಕಡೆಯ ಮನುಷ್ಯನಿಗೆ ಮರಣಶಾಸನವಾಗಲಿವೆ ಎನ್ನುವುದು ಸ್ಪಷ್ಟವಾಗಿದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ, ಕೃಷಿ ಕಾಯ್ದೆಯನ್ನು ಪ್ರತ್ಯೇಕವಾಗಿ ನೋಡದೆ, ಇದರೊಡನೆಯೇ ಜಾರಿಯಾಗಿರುವ ಭೂ ಸುಧಾರಣಾ ಕಾಯ್ದೆಗಳು, ಅರಣ್ಯ ನೀತಿ, ಮಾರುಕಟ್ಟೆ ನೀತಿಗಳು ಮತ್ತು ಕಾರ್ಪೋರೇಟ್ ವಿದೇಶಿ ನೇರ ಬಂಡವಾಳ ಹೂಡಿಕೆಯ ನೀತಿಗಳನ್ನೂ ಪರಾಮರ್ಶಿಸಬೇಕಾಗುತ್ತದೆ. ಬಂಡವಾಳಶಾಹಿಯ ಅಭಿವೃದ್ಧಿ ಯೋಜನೆಗಳು ಆರ್ಥಿಕ ತರತಮಗಳನ್ನು ಹಿಗ್ಗಿಸುವ ರೀತಿಯಲ್ಲೇ ರೂಪುಗೊಂಡಿರುತ್ತವೆ. ಹಾಗೆಯೇ ಬಂಡವಾಳ ಕ್ರೋಢೀಕರಣದೊಂದಿಗೆ ಸಂಪತ್ತಿನ ಶೇಖರಣೆಯೂ ಈ ಮಾರ್ಗದ ಅಂತಿಮ ಗುರಿಯಾಗಿರುತ್ತದೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳಲ್ಲಿ ಈ ಎರಡೂ ಪ್ರಕ್ರಿಯೆಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಹುನ್ನಾರವನ್ನು ಗುರುತಿಸಬಹುದು. ಎಪಿಎಂಸಿ ಅಥವಾ ಮತ್ತಾವುದೇ ರೀತಿಯ ರೈತ ಸ್ನೇಹಿ ಮಾರುಕಟ್ಟೆಯನ್ನು ರದ್ದುಪಡಿಸಿ, ರೈತರ ಫಸಲು ಮಾರಾಟಕ್ಕೆ ಮುಕ್ತ ಮಾರುಕಟ್ಟೆಯನ್ನು ರೂಪಿಸುವುದರಿಂದ ಕಾರ್ಪೋರೇಟ್ ಉದ್ಯಮ ಇಡೀ ಮಾರುಕಟ್ಟೆಯನ್ನೇ ಆಕ್ರಮಿಸುತ್ತದೆ. ನಿಯಂತ್ರಿತ ಮಾರುಕಟ್ಟೆಯಿಂದಾಚೆಗೆ ರೂಪುಗೊಳ್ಳುವ ಕಾರ್ಪೋರೇಟ್ ಜಗುಲಿಗಳಲ್ಲಿ ರೈತರ ಚೌಕಾಸಿ ಸಾಮರ್ಥ್ಯವೂ ಕುಸಿಯುತ್ತದೆ. ನೂತನ ಕಾಯ್ದೆಗಳ ಅನುಸಾರ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಕಾರ್ಪೋರೇಟ್ ಉದ್ದಿಮೆಗಳಿಗೆ ಪೂರ್ಣ ಅವಕಾಶ ನೀಡುವುದರಿಂದ, ಔದ್ಯಮಿಕ ವಲಯ ಕೃಷಿ ಉತ್ಪನ್ನದ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತದೆ. ರೈತರು ಬೆಳೆಯುವ ದವಸ ಧಾನ್ಯಗಳನ್ನು ಖರೀದಿಸುವ ಮತ್ತು ಸರಬರಾಜುಮಾಡುವ ಎಲ್ಲ ಮಾರುಕಟ್ಟೆ ಸಾಧನಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಪಡುತ್ತವೆ.

ಭಾರತದಲ್ಲಿ ಶೇ 86ರಷ್ಟು ಭೂ ಹಿಡುವಳಿಯು 2 ಹೆಕ್ಟೇರುಗಳಿಗಿಂತಲೂ ಕಡಿಮೆ ಇದೆ. ದೇಶದ ಶೇ 42ರಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ನೇರವಾಗಿ ಅವಲಂಬಿಸಿದ್ದಾರೆ. ರೈತಾಪಿಯ ಸರಾಸರಿ ಭೂ ಹಿಡುವಳಿ 1.08 ಹೆಕ್ಟೇರ್ಗಳಷ್ಟಿದೆ. 2013ರ ಸಮೀಕ್ಷೆಯ ಅನುಸಾರ ಗ್ರಾಮೀಣ ಪ್ರದೇಶಗಳ 15.61 ಕೋಟಿ ಕುಟುಂಬಗಳ ಪೈಕಿ ಒಂಬತ್ತು ಕೋಟಿ ಕುಟುಂಬಗಳು ಕೃಷಿ ಕುಟುಂಬಗಳೇ ಆಗಿವೆ. 2011ರ ವೇಳೆಗೇ ಭಾರತದಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ 26 ಕೋಟಿಗಿಂತಲೂ ಹೆಚ್ಚಾಗಿತ್ತು ಎನ್ನುವುದನ್ನು ಗಮನಿಸಿದಾಗ, ಕಳೆದ ಆರು ದಶಕಗಳಲ್ಲಿ ಬೇಸಾಯಗಾರರಾಗಿದ್ದ ಲಕ್ಷಾಂತರ ಕುಟುಂಬಗಳು ತಮ್ಮ ಭೂಮಿಯನ್ನು ಕಳೆದುಕೊಂಡು ಕೃಷಿ ಕಾರ್ಮಿಕರಾಗಿರುವುದು, ನಗರಗಳಲ್ಲಿ ವಲಸಿಗ ಸ್ಲಂ ನಿವಾಸಿಗಳಾಗಿರುವುದು ಸ್ಪಷ್ಟವಾಗುತ್ತದೆ.

ಅಂದರೆ ಕೃಷಿ ಆಧಾರಿತ ಕುಟುಂಬಗಳ ಸಂಖ್ಯೆ ಹೆಚ್ಚಾಗಿದ್ದರೂ, ದುಡಿದು ತಿನ್ನಬೇಕಾದ, ದಿನಗೂಲಿಯನ್ನು ಆಧರಿಸಿದ ಮತ್ತು ಕೃಷಿಯೇತರ ಕೆಲಸಗಳನ್ನು ಅವಲಂಬಿಸುವ ಕುಟುಂಬಗಳ ಸಂಖ್ಯೆಯೂ ಹೆಚ್ಚಾಗಿರುವುದನ್ನು ಇಲ್ಲಿ ಗಮನಿಸಬೇಕಿದೆ. 14 ಕೋಟಿಗಿಂತಲೂ ಹೆಚ್ಚು ವಲಸೆ ಕಾರ್ಮಿಕರು ಇಂದು ಭಾರತದ ನಗರಗಳ ಸ್ಲಂಗಳಲ್ಲಿ, ಹೊರವಲಯಗಳಲ್ಲಿ ನೆಲೆಸಿದ್ದರೆ, ಇವರಲ್ಲಿ ಬಹುಪಾಲು ಜನರು ತಮ್ಮ ಭೂಮಿಯನ್ನು ಕಳೆದುಕೊಂಡವರೇ ಆಗಿರುತ್ತಾರೆ. ಕೋವಿದ್ ಬಿಕ್ಕಟ್ಟಿನ ಸಂದರ್ಭದಲ್ಲೇ 1.09 ಕೋಟಿ ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿರುವುದನ್ನು ಕಂಡಿದ್ದೇವೆ. ಈ ವಲಸೆಯ ಪ್ರಮಾಣ ಹೆಚ್ಚಾಗಲು ಮೂಲ ಕಾರಣ ಜಾಗತೀಕರಣ, ನವ ಉದಾರವಾದಿ ಆರ್ಥಿಕ ನೀತಿ ಮತ್ತು ಮಾರುಕಟ್ಟೆ ಆರ್ಥಿಕತೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇತರ ಚಟುವಟಿಕೆಗಳೂ ಇಲ್ಲದಿರುವುದರಿಂದಲೇ ನಗರಗಳಿಗೆ ವಲಸೆ ಬರುವವರ ಸಂಖ್ಯೆ ಏರುತ್ತಲೇ ಇದೆ.

ಗ್ಯಾಟ್ಸ್ ಕೃಷಿ ಒಪ್ಪಂದಕ್ಕೆ ಭಾರತ ಸಹಿ ಮಾಡಿದ ನಂತರ, 1995 ರಿಂದ 2019ವರೆಗೆ ದೇಶದಲ್ಲಿ ಒಟ್ಟು 3 ಲಕ್ಷ 65 ಸಾವಿರ ರೈತರು ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದು ಭಾರತದ ಕೃಷಿ ಬಿಕ್ಕಟ್ಟಿನ ಕರಾಳ ಮುಖವನ್ನು ಬಿಂಬಿಸುವುದಿಲ್ಲವೇ ? ಈ ಆತ್ಮಹತ್ಯೆಗಳು ಸ್ವ ಪ್ರೇರಿತವೇ ಆದರೂ ಇದಕ್ಕೆ ಕಾರಣ ಸರ್ಕಾರಗಳು ಅನುಸರಿಸುತ್ತಿರುವ ಕೃಷಿ ನೀತಿಗಳಲ್ಲವೇ ? ಆದರೆ ಭೂಮಿಯನ್ನೇ ನಂಬಿ ಬದುಕುವ ಜೀವಿಗಳಿಗೆ ತಮ್ಮ ಮೂಲಾಧಾರವೇ ಕುಸಿಯುವಂತಾದಾಗ ಮತ್ತೇನು ಮಾಡಿಯಾರು ಎಂಬ ಮಾನವೀಯ ಪ್ರಶ್ನೆಗೆ ನಮ್ಮ ಸರ್ಕಾರಗಳು ಉತ್ತರಿಸಬೇಕಿದೆ. ಜೀವ ಕಳೆದುಕೊಂಡ ರೈತರು ಹೇಡಿಗಳಲ್ಲ ಆದರೆ ಹಣಕಾಸು ಕೊರತೆ, ಮೂಲ ಬಂಡವಾಳದ ಕೊರತೆ ಮತ್ತು ಅಸಮರ್ಪಕ ಮಾರುಕಟ್ಟೆಯ ಅಸಹಾಯಕತೆ ಅವರನ್ನು ಸಾವಿನಂಚಿಗೆ ದೂಡುತ್ತದೆ. ಈ ಲಕ್ಷಾಂತರ ರೈತರು ಜೀವ ಕಳೆದುಕೊಳ್ಳಲು ಕಾರಣ ಕೃಷಿ ಕ್ಷೇತ್ರದ ಮೇಲಿನ ಕಾರ್ಪೋರೇಟ್ ಮಾರುಕಟ್ಟೆಯ ಹಿಡಿತ ಮತ್ತು ಆಧಿಪತ್ಯ.

ಕೃಷಿಗೆ ಅಗತ್ಯವಾದ ಬೀಜ, ಗೊಬ್ಬರ ಮತ್ತು ರಾಸಾಯನಿಕ ವಸ್ತುಗಳು ಮಾರುಕಟ್ಟೆಯ ಹಿಡಿತಕ್ಕೆ ಒಳಪಟ್ಟಂತೆಲ್ಲಾ ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಇದರೊಂದಿಗೆ ಆಧುನಿಕ ಅಭಿವೃದ್ಧಿ ಪಥದ ನಗರೀಕರಣ, ಹೆದ್ದಾರಿ ನಿರ್ಮಾಣ ಮತ್ತು ಹಣಕಾಸು ಬಂಡವಾಳ ಪ್ರೇರಿತ ಅಭಿವೃದ್ಧಿ ಯೋಜನೆಗಳು ಹೆಚ್ಚು ಹೆಚ್ಚು ರೈತರು ಭೂಮಿಯನ್ನು ಕಳೆದುಕೊಳ್ಳುವಂತೆ ಮಾಡಿವೆ. ಹಣಕಾಸು ಸಂಸ್ಥೆಗಳು ಒದಗಿಸುವ ಸಾಲದ ಪ್ರಮಾಣ ಬೃಹತ್ತಾಗಿ ಕಾಣಿಸುವುದಾದರೂ, ಉಳುಮೆ ಮಾಡುವ ರೈತನಿಗೆ ತನ್ನ ಕೃಷಿ ಉತ್ಪನ್ನದಿಂದ ಸಾಲವನ್ನೂ ಪಾವತಿಸಿ, ಕುಟುಂಬವನ್ನೂ ನಿರ್ವಹಿಸುವುದು ದುಸ್ತರವಾಗಿರುವುದರಿಂದಲೇ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ದುರಂತ ಎಂದರೆ ಇಡೀ ದೇಶವೇ ಆಧುನಿಕತೆಯ ಉತ್ತುಂಗ ತಲುಪಬೇಕೆಂದು ಬಯಸುವ ಹಿತವಲಯದ ಮೇಲ್ವರ್ಗಗಳು ಮತ್ತು ಬಂಡವಳಿಗ ವರ್ಗ, ದೇಶದ ಸಂಪತ್ತಿನ ಉತ್ಪಾದನೆಯಲ್ಲಿ ಸಿಂಹಪಾಲು ಒದಗಿಸುವ ರೈತನನ್ನು, ಅಧುನಿಕ ಬದುಕಿನಿಂದ ದೂರವೇ ಇರಬೇಕೆಂದು ಬಯಸುತ್ತದೆ. ಹಾಗಾಗಿಯೇ ನಗರಕೇಂದ್ರಿತ ಸಾರ್ವಜನಿಕ ಸಂಕಥನಗಳಲ್ಲಿ ರೈತನ ಬದುಕು ಒಂದು ಮುಖ್ಯ ವಿಷಯವಾಗಿ ಚರ್ಚೆಗೊಳಗಾಗುವುದೇ ಇಲ್ಲ.

ಕಳೆದ ಹತ್ತು ತಿಂಗಳಿನಿಂದ ದೆಹಲಿಯಲ್ಲಿ ಮತ್ತು ದೇಶಾದ್ಯಂತ ಮುಷ್ಕರನಿರತರಾಗಿರುವ ರೈತರು ಕೇವಲ ತಮ್ಮ ಬದುಕಿನ ಪ್ರಶ್ನೆಗಾಗಿ ಹೋರಾಡುತ್ತಿಲ್ಲ. ತಮ್ಮ ವ್ಯಕ್ತಿಗತ ಅಸ್ತಿತ್ವದೊಂದಿಗೆ, ದೇಶದ ಜನತೆಯ ಆಹಾರದ ಹಕ್ಕಿನ ಪ್ರಶ್ನೆಯೂ ಈ ಹೋರಾಟದಲ್ಲಿ ಅಡಗಿದೆಯಲ್ಲವೇ ? ನೂತನ ಭೂ ಸುಧಾರಣಾ ಕಾಯ್ದೆಯ ಮೂಲಕ ಕೃಷಿ ಭೂಮಿಯ ಕಾರ್ಪೋರೇಟ್ ಕಬಳಿಕೆಗೆ ಸುಗಮ ಮಾರ್ಗವನ್ನು ಕಲ್ಪಿಸಿರುವ ಆಳುವ ವರ್ಗಗಳು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಮೂಲಕವೇ ಜನಸಾಮಾನ್ಯರ ಅಭಿವೃದ್ಧಿಯನ್ನು ಕಾಣುತ್ತವೆ. ಆದರೆ ಭಾರತ ಇನ್ನೂ ಹಳ್ಳಿಗಳಲ್ಲೇ ಇದೆ. ಪಶುಸಂಗೋಪನೆ ಮತ್ತು ಕೃಷಿ ಬಹುಪಾಲು ನಗರವಾಸಿಗಳ ಬದುಕಿಗೂ ಆಧಾರವಾಗಿದೆ. ಕೃಷಿ ಕ್ಷೇತ್ರದ ಯಾವುದೇ ಬದಲಾವಣೆಗಳು ಪಶುಸಂಗೋಪನೆಯ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ತಮ್ಮ ಮೂಲ ಕೃಷಿ ನೆಲೆಯಿಂದ ವಲಸೆ ಬಂದು ನಗರದಲ್ಲಿ ನೆಲೆಸಿರುವ ಎರಡನೆ, ಮೂರನೆಯ ಪೀಳಿಗೆಯೂ ಸಹ ಯಾವುದೋ ಒಂದು ರೀತಿಯಲ್ಲಿ ಗ್ರಾಮೀಣ ಕೃಷಿ ಮತ್ತು ಆರ್ಥಿಕತೆಯನ್ನು ಅವಲಂಬಿಸಿರುತ್ತಾರೆ.

ಮಾರುಕಟ್ಟೆಗೆ ಅಗತ್ಯವಾದ ವಾಣಿಜ್ಯ ಬೆಳೆಗಳ ಬಗ್ಗೆಯೇ ಹೆಚ್ಚು ಗಮನ ನೀಡುವ ಕಾರ್ಪೋರೇಟ್ ಉದ್ದಿಮೆಗಳು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ನಮ್ಮ ನೆಲ ಮತ್ತು ಜಲ ಎರಡೂ ಸಹ ವಿದೇಶಿ ಮಾರುಕಟ್ಟೆಗೆ ಅಗತ್ಯವಾದ ಉತ್ಪನ್ನಗಳ ಗಣಿಗಳಾಗುತ್ತವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಲಮಿಷನ್ ಯೋಜನೆಯ ಹಿಂದೆಯೂ ಈ ಜಾಗತಿಕ ಮಾರುಕಟ್ಟೆಯ ಹಿತಾಸಕ್ತಿಯೇ ಅಡಗಿರುವುದನ್ನು ನಿರ್ಲಕ್ಷಿಸುವಂತಿಲ್ಲ. ಅವಶ್ಯ ವಸ್ತುಗಳ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ಈಗಾಗಲೇ ಕೇಂದ್ರ ಸರ್ಕಾರ ಜನಸಾಮಾನ್ಯರ ನಿತ್ಯ ಬದುಕಿಗೆ ಅವಶ್ಯವಾದ ಆಹಾರ ಪದಾರ್ಥಗಳನ್ನು ಮುಕ್ತ ಮಾರುಕಟ್ಟೆ ಒಪ್ಪಿಸಿಯಾಗಿದೆ. ಈ ಕರಾಳ ಕಾಯ್ದೆಗಳು ಅನುಷ್ಟಾನವಾದರೆ, ಆಹಾರ ಉತ್ಪಾದನೆ, ಸಂಗ್ರಹ, ವಿತರಣೆ, ವಿನಿಮಯ , ಸರಬರಾಜು ಮತ್ತು ಮಾರಾಟ ಎಲ್ಲವೂ ಕಾರ್ಪೋರೇಟ್ ಹಿಡಿತಕ್ಕೊಳಪಡುತ್ತವೆ.

ಆಗ ದೇಶದ ಆರ್ಥಿಕತೆಯಲ್ಲಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು ಸಮಸ್ತ ಜನತೆಯನ್ನೂ ಕಾಡಲಿವೆ. ಇಂದಿಗೂ ಸಹ ಭಾರತದ ಶೇ 80ಕ್ಕೂ ಹೆಚ್ಚು ಜನರು ತಮ್ಮ ದಿನಸಿ ಖರೀದಿಯನ್ನು ನಿಯಂತ್ರಿತವಾಗಿ ನಿರ್ವಹಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಂದು ಗ್ರಾಹಕ ಸಂಸ್ಕೃತಿಗೆ ಬಲಿಯಾಗಿ, ಕಾರ್ಪೋರೇಟ್ ಮಾಲ್ ಸಂಸ್ಕೃತಿಗೆ ಶರಣಾಗಿರುವ ಹಿತವಲಯದ ಮೇಲ್ ಮಧ್ಯಮ ವರ್ಗಗಳಿಗೆ ಈ ವಾಸ್ತವದ ಪ್ರಜ್ಞೆಯೂ ಇರಬೇಕಲ್ಲವೇ ? ದೇಶದ ಆಹಾರ ಉತ್ಪಾದನೆ ಮತ್ತು ನಿರ್ವಹಣೆಯನ್ನು ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸಿದ ನಂತರ ಈ ಶೇ 80ರಷ್ಟು ಜನರು ತಮ್ಮ ಆಹಾರದ ಹಕ್ಕನ್ನೇ ಕಳೆದುಕೊಳ್ಳುತ್ತಾರೆ. ಸಮಾಜದ ಅಂಚಿನಲ್ಲಿರುವ ಅಸಂಖ್ಯಾತ ಜನಸಮುದಾಯಗಳು ತಮ್ಮ ನಿತ್ಯ ಬದುಕು ನಿರ್ವಹಿಸಲು ಮಾರುಕಟ್ಟೆ ಸಾಧನಗಳನ್ನೇ ಅವಲಂಬಿಸಬೇಕಾಗುತ್ತದೆ. ಏಕೆಂದರೆ ಈ ಕೃಷಿ-ಕಾರ್ಮಿಕ ಕಾಯ್ದೆಗಳು ಉತ್ಪಾದನೆಯ ಮೂಲಗಳನ್ನು ಮತ್ತು ಸಾಧನಗಳನ್ನು ಸಂಪೂರ್ಣವಾಗಿ ಬಂಡವಾಳಶಾಹಿಗಳಿಗೆ ಒಪ್ಪಿಸಿರುತ್ತವೆ.

ಜನತೆಯ ಆಹಾರದ ಹಕ್ಕನ್ನೇ ಕಸಿದುಕೊಳ್ಳುವ ಕೃಷಿ ಕಾಯ್ದೆಗಳು ಮತ್ತು ದುಡಿಮೆಯ ಹಕ್ಕುಗಳನ್ನೇ ಕಸಿದುಕೊಳ್ಳುವ ಕಾರ್ಮಿಕ ಸಂಹಿತೆಗಳು, ಉತ್ಪಾದನೆಯ ಮೂಲಗಳನ್ನು ಮತ್ತು ಸಾಧನಗಳನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುವ ಮೂಲಕ ಇಡೀ ದೇಶವನ್ನು ಮತ್ತೊಮ್ಮೆ ದಾಸ್ಯಕ್ಕೆ ದೂಡುತ್ತವೆ. ಈ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವವರು ರೈತರೇ ಅಲ್ಲ ಎಂದು ಹೇಳುವ ಮುನ್ನ ರೈತರೇ ಏಕಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ. ಇದು ಸಮಸ್ತ ಜನತೆಯ ಬದುಕಿನ ಪ್ರಶ್ನೆ. ಈ ಒಂದು ಪೀಳಿಗೆಯ ಪ್ರಶ್ನೆಯಲ್ಲ. ಮುಂದಿನ ಹಲವು ಪೀಳಿಗೆಗಳ ಪ್ರಶ್ನೆ. ಭಾರತದ ನಾಗರಿಕತೆಯ ಪ್ರಶ್ನೆ. ಭಾರತದ ಸಮಸ್ತ ಸಂಪತ್ತು ಮತ್ತು ಸಂಪನ್ಮೂಲಗಳ ಪ್ರಶ್ನೆ. ಕಾರ್ಪೋರೇಟ್ ಬಂಡವಾಳದ ಲಾಭದಾಯಕ ವ್ಯಾಪಾರ ವಹಿವಾಟಿಗೆ ಬಲಿಯಾಗಲಿರುವ ಭಾರತದ ಕೃಷಿ ಭೂಮಿಯ ಪ್ರಶ್ನೆ. ಈ ಭೂಮಿ ಸಮಸ್ತ ನಾಗರಿಕರ ಸ್ವತ್ತಲ್ಲವೇ ? ಹಾಗಾದಲ್ಲಿ ದೆಹಲಿಯ ಮುಷ್ಕರದಲ್ಲಿರುವವರು ರೈತರೇ ಏಕಾಗಬೇಕು ? ರೈತರಲ್ಲದವರು ಏಕಿರಬಾರದು ?

ಈ ಪ್ರಶ್ನೆಗಳು ಪ್ರಜ್ಞಾವಂತ ಸಮಾಜವನ್ನು ಕಾಡಬೇಕಿದೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ಮಾತ್ರವೇ ಹೋರಾಡಬೇಕೇ ? ನೂತನ ಕರಾಳ ಕಾರ್ಮಿಕ ಸಂಹಿತೆಗಳ ವಿರುದ್ಧ ದುಡಿಮೆಯ ಕೈಗಳು ಮಾತ್ರವೇ ಹೋರಾಡಬೇಕೇ ? ಈ ಎರಡೂ ವರ್ಗಗಳ ಶ್ರಮದ ಫಲಾನುಭವಿಗಳಾದ ಸಾಮಾನ್ಯ ಪ್ರಜೆಗಳು ಹಕ್ಕುದಾರರಲ್ಲವೇ ? ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟ ಭೂಮಿಯ ರಕ್ಷಣೆಗಾಗಿ, ಫಸಲಿನ ರಕ್ಷಣೆಗಾಗಿ, ರೈತರ ಬೆವರಿನ ದುಡಿಮೆಯ ರಕ್ಷಣೆಗಾಗಿ ಮತ್ತು ಕೋಟ್ಯಂತರ ರೈತರ ಬದುಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಈ ಹೋರಾಟವೇ ದೇಶದ್ರೋಹ ಎಂದಾದರೆ, ಕೋಟ್ಯಂತರ ರೈತರ ಬದುಕಿಗೆ ಕಂಟಕಪ್ರಾಯವಾದ ಈ ಕಾಯ್ದೆಗಳನ್ನು ರೂಪಿಸುವುದನ್ನು ಏನೆಂದು ಪರಿಗಣಿಸಬೇಕು ? ಇಂದಿನ ಪೀಳಿಗೆಯ ಡಿಜಿಟಲ್ ಯುಗಕ್ಕೆ ಪೂರಕವಾಗಿ ದುಡಿಮೆಯ ಹಕ್ಕುಗಳನ್ನೇ ಕಸಿದುಕೊಳ್ಳುವ ಕಾಯ್ದೆಗಳು ಮುಂದಿನ ಹಲವು ಪೀಳಿಗೆಗಳಿಗೆ ದಾಸ್ಯದ ಸಂಕೋಲೆಗಳನ್ನು ತೊಡಿಸುವುದಿಲ್ಲವೇ ?

ಬಂಡವಾಳಶಾಹಿಯ ಅಭಿವೃದ್ಧಿ ಮಾರ್ಗದಲ್ಲಿ ಹೆಚ್ಚಿನ ಜನರನ್ನು ಶ್ರಮಜೀವಿಗಳನ್ನಾಗಿ ಮಾಡುತ್ತಲೇ, ಸಂಪತ್ತಿನ ಶೇಖರಣೆ ಮಾಡುವ ಒಂದು ಅಸಮತೆಯ ಸಮಾಜವನ್ನು ಸೃಷ್ಟಿಸಲಾಗುತ್ತದೆ. ಉಳ್ಳವರ ಮತ್ತು ಇಲ್ಲದವರ ನಡುವಿನ ಕಂದರ ಹೆಚ್ಚಾಗುತ್ತಾ ಹೋದಂತೆಲ್ಲಾ, ಬಂಡವಾಳ ತನ್ನ ಹಿಡಿತವನ್ನು ಬಿಗಿಯಾಗಿಸುತ್ತಲೇ ಮುನ್ನಡೆಯುತ್ತದೆ. ಈ ಭವಿಷ್ಯದ ಪೀಳಿಗೆಯ ಹಿತರಕ್ಷಣೆಗಾಗಿ ಇಂದಿನ ಪೀಳಿಗೆಯ ಯುವಕರೂ ಹೋರಾಟಕ್ಕೆ ಸಜ್ಜಾಗುವ ಸಂದರ್ಭದಲ್ಲಿ ನಾವಿದ್ದೇವೆ. ರೈತರ ಹೋರಾಟದಲ್ಲಿ ‘ ದಲ್ಲಾಳಿಗಳೇ ತುಂಬಿದ್ದಾರೆ ’ ಎಂಬ ಆರೋಪ ಮಾಡುವವರು ಅರ್ಥಮಾಡಿಕೊಳ್ಳಬೇಕಿರುವುದೇನೆಂದರೆ, ಇದು ಕೇವಲ ರೈತ ಮುಷ್ಕರ ಅಲ್ಲ, ಈ ದೇಶದ ಜನತೆಯ ಆಹಾರದ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ. ರೈತರ ದಲ್ಲಾಳಿಗಳಾಗಿಯೇ ವಿದ್ಯಾರ್ಥಿಗಳು, ಮಹಿಳೆಯರು, ಯುವ ಜನರು, ಕಾರ್ಮಿಕರು, ಆದಿವಾಸಿಗಳು, ಬುದ್ಧಿಜೀವಿಗಳು ಈ ಹೋರಾಟದಲ್ಲಿ ತೊಡಗಿದ್ದರೆ ತಪ್ಪೇನಿದೆ ?

ಛತ್ತಿಸ್ಘಡದ ಹಸ್ಡಿಯೋ ಅರಣ್ಯದ 7500 ಹೆಕ್ಟೇರ್ ಹಸಿರುವಲಯವನ್ನು ಗಣಿಗಾರಿಕೆಗೆ ಒಪ್ಪಿಸುವ ಮೂಲಕ ದೇಶದ ನಿಸರ್ಗ ಸಂಪತ್ತನ್ನು ಕಾರ್ಪೋರೇಟ್ ಲೂಟಿಕೋರರಿಗೆ ಅರ್ಪಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವುದನ್ನು ಈ ಸಂದರ್ಭದಲ್ಲಿ ಗಮನಿಸೋಣ. ಈ ವಲಯದಲ್ಲಿ ಒಟ್ಟು 1.75 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು ಅದಾನಿ ಒಡೆತನದ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಇಲ್ಲಿ ಗಣಿಗಾರಿಕೆಯಿಂದ ಜೀವ ವೈವಿಧ್ಯ ನಾಶವಾಗುವುದೇ ಅಲ್ಲದೆ ಸಾವಿರಾರು ಆದಿವಾಸಿ ಕುಟುಂಬಗಳು ಬೀದಿಪಾಲಾಗುತ್ತವೆ. ಈಗ ಇಲ್ಲಿನ ಸಾವಿರಾರು ಆದಿವಾಸಿಗಳು 300 ಕಿಲೋಮೀಟರ್ ಪಾದಯಾತ್ರೆಯ ಮೂಲಕ ತಮ್ಮ ಅರಣ್ಯ ಸಂಪತ್ತನ್ನು ಮತ್ತು ಬದುಕನ್ನು ಸಂರಕ್ಷಿಸಲು ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಹೋರಾಟಕ್ಕೂ, ಹತ್ತು ತಿಂಗಳು ಪೂರೈಸಿರುವ ರೈತ ಮುಷ್ಕರಕ್ಕೂ ವ್ಯತ್ಯಾಸವೇನಾದರೂ ಇರಲು ಸಾಧ್ಯವೇ ?

ಮತ್ತೊಂದೆಡೆ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಜನಪರ ಹೋರಾಟಗಳ ಬಗ್ಗೆ ಮತ್ತು ಜನಸಾಮಾನ್ಯರ ಹಕ್ಕೊತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಅಸಡ್ಡೆ, ನಿಷ್ಕ್ರಿಯತೆ ಮತ್ತು ಔದಾಸೀನ್ಯ. ಮತ್ತು ಜನರು ತಮ್ಮ ಬದುಕಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೋರಾಡುತ್ತಿರುವಾಗ ಆಳುವ ವರ್ಗಗಳು ತೋರುವ ತಣ್ಣನೆಯ ಕ್ರೌರ್ಯ. ಲಖೀಂಪುರ ಖೇರಿ ಒಂದು ಅಪಘಾತವೂ ಅಲ್ಲ, ಅಪವಾದವೂ ಅಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಶಿಕ್ಷಣ, ಕೈಗಾರಿಕೆ, ಉದ್ಯಮ, ಉದ್ಯೋಗ, ಕಸುಬು ಮತ್ತು ಜೀವನೋಪಾಯದ ಎಲ್ಲ ಮಾರ್ಗಗಳಲ್ಲೂ ತಡೆಗೋಡೆಗಳನ್ನು ನಿರ್ಮಿಸುತ್ತಿರುವ ಬಂಡವಾಳಶಾಹಿಯ ವಿರುದ್ಧ ಸಿಡಿದೇಳುವ ಜನಸಾಮಾನ್ಯರು ಆಳುವ ವರ್ಗಗಳಿಂದ ಮಾನವೀಯ-ಸಂವೇದನಾಶೀಲ ಸ್ಪಂದನೆಯನ್ನು ನಿರೀಕ್ಷಿಸುವ ಕಾಲ ಬಹುಶಃ ಮುಗಿದಂತೆಯೇ ಕಾಣುತ್ತಿದೆ. ಈ ಸಂದರ್ಭದಲ್ಲಿ ಕೃಷಿ ಬಿಕ್ಕಟ್ಟು ಕೇವಲ ರೈತರ ಸಮಸ್ಯೆ ಎಂದು ಕೈಕಟ್ಟಿ ಕುಳಿತರೆ ಆದೀತೇ ?

ಇದು ಗ್ರಹಿಕೆಯ ಪ್ರಶ್ನೆ. ನಮ್ಮ ಪ್ರಜ್ಞೆಯ ಪ್ರಶ್ನೆ. ರೈತ ಮುಷ್ಕರದಲ್ಲಿರುವವರು ರೈತರೇ ಅಲ್ಲ ಎಂದು ಆರೋಪಿಸುವವರು ತಮ್ಮ ಸಾಮಾಜಿಕ ಹೊಣೆಯನ್ನೂ ಅರ್ಥಮಾಡಿಕೊಳ್ಳಬೇಕಲ್ಲವೇ ? ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ರಕ್ಷಿಸುವ ಯಾವುದೇ ಹೋರಾಟದಲ್ಲಿ ಹೋರಾಟಗಾರರ ನಡುವೆ ಶ್ರಮವಿಭಜನೆಯ ಅಗತ್ಯವಿಲ್ಲ. ಅದು ಆಳುವ ವರ್ಗಗಳಿಗೆ ಉಪಯುಕ್ತವಾಗುತ್ತದೆ. ದುಡಿಮೆಯ ಕೈಗಳೆಲ್ಲವೂ ಹೋರಾಡಿದರೆ ಮಾತ್ರವೇ ಸಂಪತ್ತಿನ ಸಂರಕ್ಷಣೆ ಸಾಧ್ಯ, ಅರಣ್ಯಗಳ ರಕ್ಷಣೆ ಸಾಧ್ಯ, ಆದಿವಾಸಿಗಳ ಬದುಕಿನ ರಕ್ಷಣೆ ಸಾಧ್ಯ. ರೈತರ ಬದುಕು ನಮ್ಮದಲ್ಲ ಎಂದು ಹೇಳುವ ಮಟ್ಟಿಗೆ ನಮ್ಮ ಸಂವೇದನೆಯನ್ನು ಕಳೆದುಕೊಳ್ಳುವುದು ಬೇಕಿಲ್ಲ ಅಲ್ಲವೇ ? ಬೀದಿಗೆ ಬಿದ್ದ ಕಾರ್ಮಿಕರು, ವಲಸೆ ಹೋಗುವ ರೈತರು, ಗುಳೆ ಹೋಗುವ ಗ್ರಾಮಸ್ಥರು, ಒಕ್ಕಲೆಬ್ಬಿಸುವುದರಿಂದ ಮೂಲ ನೆಲೆ ಕಳೆದುಕೊಳ್ಳುವ ಆದಿವಾಸಿಗಳು ಎಲ್ಲರೂ ಭಾರತದ ಪ್ರಜೆಗಳೇ ಆದ ಮೇಲೆ ರೈತರ ಪರ, ಕಾರ್ಮಿಕರ ಪರ, ಆದಿವಾಸಿಗಳ ಪರ ಹೋರಾಡುವವರು ದೇಶದ್ರೋಹಿಗಳು ಹೇಗಾದಾರು ? ಇಂದು ಭಾರತದ ಸಮಸ್ತ ಪ್ರಜ್ಞಾವಂತ ಜನತೆ ರೈತರ ದನಿಗೆ ದನಿಯಾಗಿ ನಿಂತರೆ, ನಾಳೆ ವಿದ್ಯಾರ್ಥಿ ಯುವಜನರು, ನಿರುದ್ಯೋಗಿಗಳು, ಆದಿವಾಸಿಗಳು, ಮಹಿಳೆಯರು ಮತ್ತು ಶೋಷಿತರ ಹೋರಾಟದ ಮಾರ್ಗಗಳು ವಿಶಾಲವಾಗುತ್ತವೆ, ವಿಸ್ತøತವಾಗುತ್ತವೆ. ಪ್ರಜಾತಂತ್ರವೂ ಉಳಿಯುತ್ತದೆ.

ಭಾರತದ ಪ್ರಜೆಗಳಾದ ನಾವು ಒಕ್ಕೊರಲಿನಿಂದ ಹೇಳಬಹುದಲ್ಲವೇ “ ಅದು ರೈತ ಮುಷ್ಕರ ಅಲ್ಲ ಭಾರತದ ಪ್ರಜೆಗಳ ಮುಷ್ಕರ ” ಎಂದು !

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು