ಕಲಬುರ್ಗಿ(14-10-2020): ಕಳೆದ ಮೂರು ದಿನಗಳಿಂದ ಭಾರೀ ಮಳೆಗೆ ರಾಜ್ಯದ ಕಲಬುರ್ಗಿ ಜಿಲ್ಲೆ ತತ್ತರಿಸಿದ್ದು, ವಿವಿಧೆಡೆ ಜಲಾವೃತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮದಲ್ಲಿ 15 ಮನೆಗಳು ನೀರಿನಿಂದ ಮುಳುಗಡೆಯಾಗಿದೆ. ಗ್ರಾಮದ ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ.
ಕರ್ನಾಟಕದ ಬಹುತೇಕ ಕಡೆ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳು, ಕೊಡಗು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಅಲರ್ಟ್ ಘೋಷಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಇಂದು ಮತ್ತು ನಾಳೆ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.