ಬೆಂಗಳೂರು(22-01 -2021): ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನವನ್ನು ಸಾರ್ವಜನಿಕವಾಗಿಯೇ ರೇಣುಕಾಚಾರ್ಯ ಅವರು ಹೊರಹಾಕಿದ್ದರು. ಆ ಬಳಿಕ ಸಿಎಂ ಯಡಿಯೂರಪ್ಪ ಅವರಲ್ಲಿ ಮುನಿಸಿಕೊಂಡು ರೇಣುಕಾಚಾರ್ಯ ಲಾಬಿ ಮಾಡಲು ದೆಹಲಿಗೆ ವಿಮಾನವನ್ನು ಹತ್ತಿದ್ದರು. ಆದರೆ ಈ ಬಗ್ಗೆ ರೇಣುಕಾಚಾರ್ಯ ಅವರು ಪ್ರತಿಕ್ರಿಯಿಸಿದ್ದು, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನಗೆ ಯಾವ ಅಸಮಾಧಾನವೂ ಇಲ್ಲ. ದೆಹಲಿಗೆ ಹೋಗಿದ್ದು, ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಾನು ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ ದೆಹಲಿಗೆ ತೆರಳಿದ್ದೆ, ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಈ ಮೊದಲು ಮುನಿಸಿಕೊಂಡು ರೇಣುಕಾಚಾರ್ಯ ಅವರು ಶಾಸಕರ ಜೊತೆ ಗೌಪ್ಯವಾಗಿ ಸಭೆಯನ್ನು ನಡೆಸಿದ್ದರು ಎಂದು ಸುದ್ದಿಯಾಗಿತ್ತು. ರೇಣುಕಾಚಾರ್ಯಗೆ ಡೆಲ್ಲಿಯಲ್ಲಿ ಹೈಕಮಾಂಡ್ ಶಿಸ್ತು ಕಾಪಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಇದರಿಂದಾಗಿ ಕೆಂಡದಂತೆ ಡೆಲ್ಲಿಗೆ ತೆರಳಿದ್ದ ರೇಣುಕಾಚಾರ್ಯ ತಣ್ಣಗಾಗಿ ಬೆಂಗಳೂರು ವಿಮಾನವನ್ನು ಹತ್ತಿದ್ದರು ಎನ್ನಲಾಗಿದೆ.