ಒಡಿಶಾ(21-11-2020): ಒಡಿಶಾದಲ್ಲಿ ಎರಡು ಕಸ್ಟಡಿ ಸಾವುಗಳ ಬಗ್ಗೆ ಆಕ್ರೋಶದ ಮಧ್ಯೆ ಪುರಿ ಜಿಲ್ಲೆಯ ಪೊಲೀಸ್ ಅಧೀಕ್ಷಕರನ್ನು ಶುಕ್ರವಾರ ರಾತ್ರಿ ಸರ್ಕಾರ ವರ್ಗಾಯಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಖಿಲೇಶ್ವರ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸಂಬಲ್ಪುರದ ಪೊಲೀಸ್ ಅಧೀಕ್ಷಕ ಕೆ ವಿಶಾಲ್ ಸಿಂಗ್ ಅವರಿಗೆ ಪುರಿ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುರಿ ಮತ್ತು ಬಿರಾಮಿತ್ರಪುರದಲ್ಲಿ ಗುರುವಾರ ಕಸ್ಟಡಿ ಸಾವು ಸಂಭವಿಸಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಶುಕ್ರವಾರ ಸದನದಲ್ಲಿ ಗದ್ದಲ ಉಂಟು ಮಾಡಿದ್ದು, ಸ್ಪೀಕರ್ ಎಸ್ ಎನ್ ಪ್ಯಾಟ್ರೋ ಅವರು ಸದನವನ್ನು ಹಲವಾರು ಬಾರಿ ಮುಂದೂಡಿದ್ದರು.
ಕೆ ರಮೇಶ್ ಅವರ ವಿರುದ್ಧ ಕ್ರಿಮಿನಲ್ ಕೇಸ್ ಇದೆ ಎಂದು ಬುಧವಾರ ಪೊಲೀಸರು ಠಾಣೆಗೆ ಕರೆದಿದ್ದರು ಬಳಿಕ ಪುರಿಯ ಬಸೆಲಿ ಸಾಹಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅವರನ್ನು ಹತ್ಯೆ ಮಾಡಿದ್ದಾರೆಂದು ಪ್ರತಿಪಕ್ಷಗಳು ಆರೋಪಿಸಿದೆ.
ಇನ್ನೊಂದು ಪ್ರಕರಣದಲ್ಲಿ ತಾರಿಕ್ ಸಲೀಮ್ ಎಂಬ ಇನ್ನೋರ್ವ ವ್ಯಕ್ತಿ ಗುರುವಾರ ಸುಂದರ್ಗರ ಜಿಲ್ಲೆಯ ಬಿರಾಮಿತ್ರಪುರ ಪೊಲೀಸ್ ಠಾಣೆಯಲ್ಲಿ ನಿಗೂಢ ಸ್ಥಿತಿಯಲ್ಲಿ ಮೃತಪಟ್ಟಿದ್ದ.