ನವದೆಹಲಿ(03-12-2020): ದೆಹಲಿ ಚಲೋ ಪ್ರತಿಭಟನೆಯ ವೇಳೆ ಇಬ್ಬರು ರೈತರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಲಾ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಪಂಜಾಬ್ ನ ಮಾನ್ಸಾದ ಬಚೋವಾನಾ ಗ್ರಾಮದ ಗುರ್ಜಂತ್ ಸಿಂಗ್ ಎಂಬ ರೈತ ಪ್ರತಿಭಟನೆಯ ವೇಳೆ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಮೊಗಾ ಜಿಲ್ಲೆಯಲ್ಲಿ ಗುರ್ಬಚನ್ ಸಿಂಗ್ ಎಂಬ ರೈತ ಮೃತಪಟ್ಟಿದ್ದಾರೆ.
ಇದೇ ವೇಳೆ ರೈತರ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಚರ್ಚೆ ನಡೆಯುತ್ತಿದೆ. ಮಸೂದೆ ಬಗ್ಗೆ ಗೃಹ ಸಚಿವರಿಗೆ ನನ್ನ ವಿರೋಧವನ್ನು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದಾರೆ.
ಕೇಂದ್ರದ ವಿವಾದಾತ್ಮಕ ಮಸೂದೆಯನ್ನು ವಿರೋಧಿಸಿ ದೆಹಲಿಯಲ್ಲಿ ಕೇರಳ, ಪಂಜಾಬ್, ಹರ್ಯಾಣ, ಯುಪಿ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಲಕ್ಷಾಂತರ ಮಂದಿ ರೈತರು ಸೇರಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. 2 ಬಾರಿ ರೈತರ ಜೊತೆ ಮಾತುಕತೆಯ ವೇಳೆ ಉದ್ದಟತನ ಮೆರೆದ ಕೇಂದ್ರ ವಿವಾದಾತ್ಮಕ ಮಸೂದೆಯನ್ನು ಹಿಂಪಡೆಯಲೇ ಇಲ್ಲ. ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದು, ಇಬ್ಬರು ಪ್ರತಿಭಟನೆಯ ವೇಳೆ ಬಲಿಯಾಗಿದ್ದು, ಕೇಂದ್ರದ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.