ದಾವಣಗೆರೆ(07-10-2020): ದಾವಣಗೆರೆಯ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ನಡೆಸಲಾಗಿದೆ ಎಂದು ಮರುಳಸಿದ್ದಪ್ಪನವರ ಸಂಬಂಧಿಕರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಪಿಎಸ್ಐ ಪ್ರಕಾಶ್, ಹೆಡ್ ಕಾನ್ಸ್ಟೇಬಲ್ ನಾಗರಾಜ್, ಕಾನ್ಸ್ಟೇಬಲ್ ಶೇರ್ ಅಲಿ ಅವರನ್ನು ಅಮಾನತು ಮಾಡಿ, ಬಂಧಿಸಲಾಗಿದೆ.
ಪೊಲೀಸ್ ವಿಚಾರಣೆಗೆಂದು ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಪೊಲೀಸರು ವಿಚಾರಣೆಗೆ ಕರೆಸಿ, ಲಾಕಪ್ ಡೆತ್ ಮಾಡಿದ್ದಾರೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ. ಮಾಯಕೊಂಡದ ಉಗ್ರಾಣ ನಿಗಮದ ಸಮೀಪದ ಬಸ್ ಸ್ಟಾಪ್ ಬಳಿ ಶವ ಪತ್ತೆಯಾಗಿದೆ. ವಿಠ್ಠಲಾಪುರ ಗ್ರಾಮದ ನಿವಾಸಿ 46 ವರ್ಷದ ಮರುಳಸಿದ್ದಪ್ಪ ಸಾವಿಗೀಡಾಗಿದ್ದಾರೆ. ಈ ಪ್ರಕರಣದಲ್ಲಿ ಪಿಎಸ್ಐ ಮತ್ತು ಇಬ್ಬರು ಕಾನ್ಸ್ಟೇಬಲ್ಗಳನ್ನು ಬಂಧಿಸಲಾಗಿದೆ ಮತ್ತು ಸಿಐಡಿ ತನಿಖೆಗೆ ನೀಡಲಾಗಿದೆ.
ಮರುಳಸಿದ್ದಪ್ಪ 2ನೇ ಮದುವೆ ಆಗುತ್ತಿದ್ದಾರೆ ಎಂದು ಮೂರು ದಿನಗಳ ಹಿಂದೆ ಅವರ ಪತ್ನಿ ವೃಂದಮ್ಮ ಮಾಯಕೊಂಡ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮರುಳಸಿದ್ದಪ್ಪನನ್ನು ಸೋಮವಾರ ಪೊಲೀಸರು ವಿಚಾರಣೆಗೆಂದು ಕರೆಸಿದ್ದರು. ಆದರೆ, ನಿನ್ನೆ ಮರುಳಸಿದ್ದಪ್ಪ ಶವವಾಗಿ ಪತ್ತೆಯಾಗಿದ್ದರು.
ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ನಡೆಸಲಾಗಿದೆ ಎಂದು ಮರುಳಸಿದ್ದಪ್ಪನವರ ಸಂಬಂಧಿಕರು ಆರೋಪಿಸಿ ರಸ್ತೆತಡೆ ನಡೆಸಿ ಪ್ರತಿಭಟನೆಯನ್ನು ನಡೆಸಿದರು. ವಿಚಾರಣೆ ಹೆಸರಿನಲ್ಲಿ ಪೊಲೀಸ್ ಠಾಣೆಗೆ ಕರೆತಂದು ಹಲ್ಲೆ ನಡೆಸಲಾಗಿದೆ. ಪೊಲೀಸರ ಹಲ್ಲೆಯಿಂದಲೇ ಮರುಳಸಿದ್ದಪ್ಪ ಮೃತಪಟ್ಟಿದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕಲು ಬಸ್ ನಿಲ್ದಾಣದಲ್ಲಿ ಶವವಿಟ್ಟು ಪೊಲೀಸರು ನಾಟಕ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ ಭೇಟಿ ಪರಿಶೀಲನೆ ನಡೆಸಿದ್ದಾರೆ.