ಸಿಡ್ನಿ(28-10-2020): ಆಧಾನಿ ಕಂಪೆನಿಯ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದ ಪರಿಸರ ಕಾರ್ಯಕರ್ತ ಮತ್ತು ಆತನ ಕುಟುಂಬದ ಚಲನವಲನಗಳ ಮೇಲೆ ನಿಗಾ ಇರಿಸಲು ಖಾಸಗೀ ಗುಪ್ತಚರರನ್ನು ಕಂಪೆನಿಯು ನೇಮಿಸಿರುವುದಾಗಿ ವರದಿಯಾಗಿದೆ. ಪರಿಸರ ಕಾರ್ಯಕರ್ತನಾದ ಬೆನ್ ಪೆನ್ನಿಂಗ್ಸ್ ನ ಒಂಭತ್ತು ವರ್ಷ ವಯಸ್ಸಿನ ಮಗಳು ಶಾಲೆಗೆ ಹೋಗುವ ಸಮಯದಲ್ಲಿ ಆಕೆಯನ್ನು ಹಿಂಬಾಲಿಸಿದ್ದಾಗಿಯೂ, ಅಕೆಯ ಛಾಯಾಚಿತ್ರ ತೆಗೆದಿರುವುದಾಗಿಯೂ ಖಾಸಗೀ ಗುಪ್ತಚರ ಏಜೆಂಟ್ ನ್ಯಾಯಾಲಯದಲ್ಲಿ ಸಮ್ಮತಿಸಿರುವುದಾಗಿ ‘ದಿ ಗಾರ್ಡಿಯನ್’ ವರದಿ ಮಾಡಿದೆ.
ಅದೇ ರೀತಿ ಬೆನ್ ಪೆನ್ನಿಂಗ್ಸ್ ನ ಪತ್ನಿ ಸಾಗಿದ ದಾರಿಯಲ್ಲೆಲ್ಲಾ ಆಕೆಯನ್ನು ಹಿಂಬಾಲಿಸಿರುವುದಾಗಿಯೂ, ಆಕೆಯ ಫೇಸ್ಬುಕ್ ಅಕೌಂಟನ್ನು ಸೂಕ್ಷ್ಮವಾಗಿ ನಿಗಾಯಿರಿಸಿದ್ದಾಗಿಯೂ ಖಾಸಗಿ ಡೆಟೆಕ್ಟೀವ್ ನ್ಯಾಯಾಲಯಕ್ಕೆ ಸಮರ್ಪಿಸಿದ ಪತ್ರದಲ್ಲಿದೆಯೆನ್ನಲಾಗಿದೆ. ಜೊತೆಗೆ ಪರಿಸರ ಕಾರ್ಯಕರ್ತನ ಕುಟುಂಬದ ಚಲನವಲನಗಳ ಮೇಲೆ ಕಣ್ಣಿಡಲು ಸ್ವತಃ ಆಧಾನಿ ಗ್ರೂಪ್ ತನ್ನನ್ನು ನೇಮಿಸಿದ ಬಗೆಗಿರುವ ಸಾಕ್ಷಿ, ಆಧಾರಗಳನ್ನು ಖಾಸಗಿ ಗುಪ್ತಚರ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾನೆ. ಮೇ ತಿಂಗಳಲ್ಲಿ ಹೆಚ್ಚು ಸೂಕ್ಷ್ಮವಾಗಿ ನಿಗಾಯಿರಿಸಿದ ವಿಚಾರವನ್ನೂ ಅತ ತಿಳಿಸಿದ್ದಾನೆ.
ಆಧಾನಿ ಗ್ರೂಪ್ ನಡೆಸುತ್ತಿದ್ದ ಗಣಿಗಾರಿಕೆಯ ವಿರುದ್ಧ ಬೆನ್ ಪೆನ್ನಿಂಗ್ಸ್ ಹೋರಾಟ ಮಾಡಲು ತೊಡಗಿದಂದಿನಿಂದ ಆಧಾನಿ ಗ್ರೂಪ್ ಮತ್ತು ಬೆನ್ ನಡುವೆ ಕಾನೂನು ಸಮರ ನಡೆಯುತ್ತಲೇ ಇತ್ತು. ಗಣಿಗಾರಿಕೆಯ ಕೆಲವು ರಹಸ್ಯ ವಿಚಾರಗಳನ್ನು ಬೆನ್ ಬಹಿರಂಗಪಡಿಸಿರುವುದೆಂದು ಆರೋಪಿಸಿ, ಬೆನ್ ವಿರುದ್ಧ ಆಧಾನಿ ಗ್ರೂಪ್ ಕೂಡಾ ಸಿವಿಲ್ ಕೇಸು ದಾಖಲಿಸಿತ್ತು. ಆಧಾನಿ ಗ್ರೂಪ್ ಈ ರೀತಿಯಲ್ಲಿ ವಿವಿಧ ಜನರಿಂದ ಸಂಗ್ರಹಿಸಿದ ಗುಪ್ತಚರ ಮಾಹಿತಿಗಳನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆಂದು ತಿಳಿದುಬಂದಿಲ್ಲ ಎಂದೂ ‘ದಿ ಗಾರ್ಡಿಯನ್’ ತನ್ನ ವರದಿಯಲ್ಲಿ ಹೇಳಿದೆ.