ನವದೆಹಲಿ(07-12-2020): 2020 ರಿಂದ ಜೈಲಿನ ಅಂಕಿಅಂಶಗಳ ವರದಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತ ಕೈದಿಗಳ ಡೇಟಾವನ್ನು ಸೇರಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಂವಹನ ಮಾಡಲಾಗಿದೆ ಎಂದು ಕೇಂದ್ರ ಸರಕಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಜೈಲಿನ ಅಂಕಿ ಅಂಶಗಳ ವರದಿಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಕೈದಿಗಳ ಡೇಟಾವನ್ನು ಸೇರಿಸಲು ಅಗತ್ಯ ನೀತಿ ಮತ್ತು ಸ್ವರೂಪ ತಿದ್ದುಪಡಿ ಮಾಡಲು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಪಿಐಲ್ಗೆ ಪ್ರತಿಕ್ರಿಯೆಯಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಚೇತನ್ ಶರ್ಮಾ, ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ನ್ಯಾಯಪೀಠದ ಮುಂದೆ ಈ ರೀತಿ ಹೇಳಿದೆ.
ಲೈಂಗಿಕ ಅಲ್ಪಸಂಖ್ಯಾತ ಕೈದಿಗಳ ಡೇಟಾವನ್ನು ತನ್ನ ಇತ್ತೀಚಿನ ಜೈಲು ಅಂಕಿಅಂಶಗಳ ವರದಿಗಳಲ್ಲಿ ಸೇರಿಸಲು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಬಗ್ಗೆ ಡಿಸೆಂಬರ್ 1 ರಂದು ನ್ಯಾಯಾಲಯ ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ಕೇಂದ್ರದಿಂದ ಬಂದಿದೆ.