ನವದೆಹಲಿ(8-12-2020): ಕೇಂದ್ರ ಗೃಹ ಸಚಿವ ಅಮಿತ್ ಷಾ ನೂತನ ಕೃಷಿ ಮಸೂದೆಗಳ ವಿರುದ್ಧವಾಗಿ ಪ್ರತಿಭಟನಾ ನಿರತ ರೈತರನ್ನು ಇಂದು ಸಂಜೆ ಏಳು ಗಂಟೆಗೆ ಮಾತುಕತೆಗೆ ಬರಬೇಕೆಂದು ಆಹ್ವಾನವಿತ್ತಿದ್ದಾರೆ. ಐದು ಸುತ್ತಿನ ಮಾತುಕತೆಗಳೂ ವಿಫಲವಾದ ಬಳಿಕ ರೈತ, ಕಾರ್ಮಿಕ ಮತ್ತಿತರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳು ಭಾರತ್ ಬಂದ್ ಆಚರಿಸುತ್ತಿರುವ ವೇಳೆಯಲ್ಲೇ ಗೃಹ ಸಚಿವರಿಂದ ಈ ಆಹ್ವಾನ ಬಂದಿದೆ.
“ನನಗೊಂದು ದೂರವಾಣಿ ಕರೆ ಬಂತು. ಅಮಿತ್ ಷಾ ಮಾತುಕತೆಗೆ ಕರೆದಿದ್ದಾರೆ. ನಮಗೆ ಸಂಜೆ ಏಳು ಗಂಟೆಗೆ ಬರಬೇಕೆಂದು ತಿಳಿಸಲಾಗಿದೆ.” ಎಂದು ರೈತ ಮುಖಂಡ ರಾಕೇಶ್ ತಿಕಾಯಿತ್ ಹೇಳಿದ್ದಾರೆ. ಕೃಷಿ ಮಸೂದೆಗಳ ವಿರುದ್ಧದ ಭಾರತ್ ಬಂದ್ಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಸ್ತೆ ತಡೆ, ರೈಲು ತಡೆ, ಮಾರುಕಟ್ಟೆ ಬಂದ್, ಪಂಜಿನ ಮೆರವಣಿಗೆ, ಟಯರಿಗೆ ಬೆಂಕಿ ಹಚ್ಚುವುದು, ಪ್ರತಿಭಟನಾ ಸಭೆಗಳು ನಡೆಯುತ್ತಿರುವುದು ವರದಿಯಾಗಿದೆ.