ಪೋಲಿಯೋ ಲಸಿಕೆ ಮಾದರಿಯಲ್ಲೆ ಒಂದು ಅಭಿಯಾನವಾಗಿ ರೂಪಿಸಿ ಕೋವಿಡ್ ಲಸಿಕೆ ನೀಡಬೇಕು: ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆಯ ಘೋಷಣೆ ‌ಮಾಡಿದವರು‌ ಪ್ರಧಾನಿ ನರೇಂದ್ರ ಮೋದಿ. ಈಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆಯನ್ನು ಮುಂದೂಡಿದೆ. ಮಾತಿನ ಶೂರ ಮೋದಿಯವರು ಎಲ್ಲಿದ್ದಾರೆ ಈಗ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

18 ರಿಂದ 25 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪ್ರಧಾನಿಯವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲವೇ? ಮಾತು ತಪ್ಪಿದ ಪ್ರಧಾನಿ ಅವರು ಟಿವಿಯಲ್ಲಿ‌ ಕಾಣಿಸಿಕೊಂಡು ನಿಜ‌ಸಂಗತಿ ತಿಳಿಸಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು.

ಲಸಿಕೆ ಪಡೆದುಕೊಳ್ಳಲು ಆನ್‌ಲೈನ್ ಮೂಲಕ ಜನರು ಹೆಸರನ್ನು ನೋಂದಣಿ ಮಾಡಬೇಕು. ಗ್ರಾಮೀಣ ಭಾಗದ ಜನರಿಗೆ ಈ ಆನ್‌ಲೈನ್ ನೋಂದಣಿ ಕಷ್ಟದ ಕೆಲಸ, ಹೀಗಾಗಿ ಕೊರೊನಾ ಲಸಿಕೆ ನೀಡುವುದನ್ನು ಪೋಲಿಯೋ ಲಸಿಕೆ ಮಾದರಿಯಲ್ಲೆ ಒಂದು ಅಭಿಯಾನವಾಗಿ ರೂಪಿಸಿ, ಜನರ ಬಳಿಗೆ ಹೋಗಿ ಲಸಿಕೆ ನೀಡಬೇಕು. ಲಸಿಕೆ ಪಡೆದವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ತುಂಬಾ ಕಡಿಮೆ ಇದೆ. ಹೀಗಾಗಿ ರಾಜ್ಯದಲ್ಲಿರುವ 18 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ಎಲ್ಲರಿಗೂ ಶೀಘ್ರವಾಗಿ ಲಸಿಕೆ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿಯವರ ಜೊತೆ ಲಸಿಕೆ ವಿಚಾರವಾಗಿ ಚರ್ಚಿಸಿದ್ದೇನೆ. ಆರುವರೆ ಕೋಟಿ ಲಸಿಕೆಯ ಅಗತ್ಯವಿದೆ ಎಂದಿದ್ದಾರೆ. ನನ್ನ ಪ್ರಕಾರ ಈ ತಿಂಗಳ ಅಂತ್ಯದ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದನ್ನು ಪ್ರಾರಂಭಿಸಲು ಸಾಧ್ಯವಾಗದು. ಬೇಗ ಸಿಕ್ಕಿದ್ದರೆ ಸೋಂಕು ಇನ್ನಷ್ಟು ಕಡಿಮೆಯಾಗುತ್ತಿತ್ತು. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಲಸಿಕೆ ತಯಾರಿಕೆ ಸಂಬಂಧ 162 ಯುನಿಟ್ ಗಳಿಗೆ ಕೇಂದ್ರ ಸರ್ಕಾರ ಟೆಂಡರ್ ಕರೆದಿತ್ತು, ಈ ಪೈಕಿ 30 ಯುನಿಟ್ ಗಳಷ್ಟೇ ಕಾರ್ಯಾರಂಭ ಮಾಡಿವೆ. ದೇಶದಲ್ಲಿ ಲಸಿಕೆಯ ಅಭಾವ ಉಂಟಾಗಲು ಇದೇ ಮುಖ್ಯ ಕಾರಣ. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ತಾತ್ಸಾರ ಧೋರಣೆಗೆ ಜನ ಜೀವ ತೆರುವಂತಾಗಿದೆ ಎಂದು ಆರೋಪಿಸಿದ್ದಾರೆ.

45 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಗಷ್ಟೇ ಕೇಂದ್ರ ಸರ್ಕಾರ ಹಣ ಕೊಡುವುದು, ಅದಕ್ಕಿಂತ ಕೆಳಗಿನ ವಯೋಮಾನದ ಜನರಿಗೆ ನೀಡುವ ಲಸಿಕೆಗೆ ರಾಜ್ಯಗಳೇ ಹಣ ಹಾಕಬೇಕು. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಪಡೆಯುವುದೊಂದೆ ಸೋಂಕು ತಡೆಗಟ್ಟಲು ಇರುವ ದಾರಿ, ಹೀಗಾಗಿ ರಾಜ್ಯ ಸರ್ಕಾರ ವಿಳಂಬ ಮಾಡದೆ ಎಲ್ಲರಿಗೂ ಲಸಿಕೆ ನೀಡಬೇಕು. ಈ ವರೆಗೆ 45 ವರ್ಷ ಮೇಲ್ಪಟ್ಟ ಶೇ.25 ಜನರಿಗಷ್ಟೇ ಕೊರೊನಾ ಲಸಿಕೆ ನೀಡಲಾಗಿದೆ. ನಮ್ಮಲ್ಲೇ ಲಸಿಕೆಯ ಅಗತ್ಯತೆ ಹೆಚ್ಚಿರುವಾಗ ಪ್ರಧಾನಿ ಮೋದಿ ಅವರು ವಿದೇಶಗಳಿಗೆ 6 ಕೋಟಿ ಲಸಿಕೆ ನೀಡಿ ಭಾರತೀಯರು ಲಸಿಕೆಗಾಗಿ ಪರದಾಡುವಂತೆ ಮಾಡಿದ್ದಾರೆ. ಸೋಂಕು ಹರಡಲು ಇದೂ ಒಂದು ಕಾರಣ ಎಂದಿದ್ದಾರೆ.

ನಿತ್ಯ ಕೊರೊನಾ ಸೋಂಕು ಮಿತಿಮೀರಿ ಏರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ನಾಯಕರು ಕೊರೊನಾ ಸೋಂಕು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಲಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ. ಸರ್ಕಾರದ ಅಧಕ್ಷತೆ ಹಾಗೂ ದುರಾಡಳಿತಕ್ಕೆ ಅಮಾಯಕ ಜನರು ಬಲಿಯಾಗುವುದು ಬೇಡ. ರಾಜ್ಯ ಕಾಂಗ್ರೆಸ್ ಪಕ್ಷವು ಬಡರೋಗಿಗಳಿಗಾಗಿ 10 ಆಂಬುಲೆನ್ಸ್ ಗಳನ್ನು ವ್ಯವಸ್ಥೆಗೊಳಿಸಿ ಅವುಗಳ ಮೂಲಕ ಉಚಿತ ಸೇವೆ ನೀಡುತ್ತಿದೆ ಹಾಗೂ ಕೊರೊನಾ ಸಹಾಯವಾಣಿಯನ್ನು ತೆರೆದು ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ನೀಡುತ್ತಿದೆ. ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಇಂಥಾ ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತು, ನೆರವಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು