ಉತ್ತರಪ್ರದೇಶ(09-02-2021): ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಪೋಸ್ಟ್ ಒಳಗೆ ಮುಸ್ಲಿಂ ಯುವಕನೋರ್ವನನ್ನು ಹಿಂಸಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ದೌರ್ಜನ್ಯದ ಘಟನೆ ಉತ್ತರ ಪ್ರದೇಶದ ಮುಜಫರ್ನಗರ ಜಿಲ್ಲೆಯ ಶಹಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಸೌಲಿ ಹೊರವಲಯದಲ್ಲಿ ನಡೆದಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದ ನಂತರ, ಮುಜಫರ್ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸಬ್ ಇನ್ಸ್ ಪೆಕ್ಟರ್ ಶ್ರೇಣಿಯ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
ವೀಡಿಯೊದಲ್ಲಿ, ಸಬ್-ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಬಲಿಪಶುವಿನ ಪ್ಯಾಂಟ್ ಬಿಚ್ಚುವಂತೆ ಆಗ್ರಹಿಸಿದ್ದಾರೆ. ಬಳಿಕ ಅವನಿಗೆ ಹೀನಾಯವಾಗಿ ಥಳಿಸಿದ್ದಾರೆ. ಪೊಲೀಸ್ ಅಧಿಕಾರಿ ವ್ಯಕ್ತಿಯನ್ನು ಥಳಿಸುತ್ತಿದ್ದಂತೆ, ಸಂತ್ರಸ್ತ ಚೀರಾಡುತ್ತಿದ್ದಾನೆ.
ಸಂತ್ರಸ್ತನನ್ನು ಮೋಮಿನ್ ಎಂದು ಗುರುತಿಸಲಾಗಿದೆ ಎಂದು ಆನ್ಲೈನ್ ನ್ಯೂಸ್ ಪೋರ್ಟಲ್ “ನ್ಯೂಸ್ ಬಸ್ಟ್ “ತನ್ನ ವರದಿಯಲ್ಲಿ ತಿಳಿಸಿದೆ. ಈ ವೈರಲ್ ವಿಡಿಯೋ ಆಧಾರದ ಮೇಲೆ ಕಾರ್ಯನಿರ್ವಹಿಸಿದ ಎಸ್ಎಸ್ಪಿ ಅಭಿಷೇಕ್ ಯಾದವ್,ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ ನ್ನು ಅಮಾನತುಗೊಳಿಸಿದ್ದಾರೆ.