ವಾರಣಾಸಿ (18-12-2020): ಜಾಹೀರಾತು ವೆಬ್ಸೈಟ್ OLX ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಚೇರಿಯನ್ನು ಮಾರಾಟಕ್ಕೆ ಇಟ್ಟಿರುವ ಘಟನೆ ನಡೆದಿದೆ.
ಮೋದಿಯವರ ವಾರಣಾಸಿ ಕಚೇರಿಯನ್ನು 7.5 ಕೋಟಿ ರೂ.ಗೆ ಮಾರಾಟಕ್ಕೆ ಇಡಲಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಜಾಹೀರಾತಿನಲ್ಲಿ ಕಚೇರಿಯ ವಿವರಗಳು ಮತ್ತು ಫೋಟೋಗಳಿವೆ. ಪೊಲೀಸರು ಜಾಹೀರಾತನ್ನು ತೆಗೆದು ಹಾಕಿ ಎಫ್ಐಆರ್ ದಾಖಲಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, OLX ಜಾಹೀರಾತಿನಲ್ಲಿ ವಾರಣಾಸಿಯ ರವೀಂದ್ರಪುರಿ ಪ್ರದೇಶದ ಪ್ರಧಾನಿ ಮೋದಿಯವರ ಸಂಸದೀಯ ಕಚೇರಿಯಲ್ಲಿ 4 ಕೊಠಡಿಗಳು ಮತ್ತು 4 ಸ್ನಾನಗೃಹಗಳು ಇವೆ. 6,500 ಚದರ ಅಡಿ ವಿಸ್ತೀರ್ಣದ ಕಾರ್ಪೆಟ್ ಪ್ರದೇಶದೊಂದಿಗೆ ವಿಲ್ಲಾ ಇದೆ ಎಂದು ಹೇಳಲಾಗಿದೆ.
ಪೊಲೀಸರು ಈಗ ಜಾಹೀರಾತನ್ನು ತೆಗೆದುಹಾಕಿದ್ದಾರೆ ಮತ್ತು ಪೋಸ್ಟ್ ಹಾಕುವಲ್ಲಿ ಭಾಗಿಯಾಗಿರುವ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಲಕ್ಷ್ಮೀಕಾಂತ್ ಓಜಾ ಎಂದು ಹೇಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.