ಆದಿತ್ಯನಾಥ್ ಸರಕಾರ ಜಂಗಲ್ ರಾಜ್ ಸರಕಾರ: ಪಿಎಫ್ ಐ ಆರೋಪ

pfi protest
Share on facebook
Share on twitter
Share on linkedin
Share on whatsapp
Share on telegram
Share on email
Share on print
ಬಂಟ್ವಾಳ(08/10/2020): ಹಾಥರಸ್ ನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಉತ್ತರ ಪ್ರದೇಶದ ಬಿಜೆಪಿ ಸರಕಾರ ತನಗೆ ಜಾಗತಿಕ ಮಟ್ಟದಲ್ಲಿ ಆಗಿರುವ ಮುಜುಗರವನ್ನು ತಪ್ಪಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದು  ಪಿಎಫ್ ಐ ಬಂಟ್ವಾಳ ತಾಲೂಕು ಸಮಿತಿ ಆರೋಪಿಸಿದೆ.  ಇಂದು ಬಿ.ಸಿ.ರೋಡಿ‌ನಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ  ಈ ಆರೋಪ ಮಾಡಿದೆ.
ಆದಿತ್ಯನಾಥ್ ಸರಕಾರ ಜಂಗಲ್ ರಾಜ್ ಆಗಿ ಮಾರ್ಪಟ್ಟಿದ್ದು ಅಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರಸಕ್ತ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರೊಂದಿಗೆ ದಲಿತರು ಮತ್ತು ಮಹಿಳೆಯರು ಕೂಡಾ ಅಸುರಕ್ಷಿತರಾಗಿದ್ದಾರೆ. ಹಾಥರಸ್ ಅತ್ಯಾಚಾರ ಪ್ರಕರಣ ಸಹಿತ ಹಲವು ಘಟನೆಗಳಿಂದ ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗರಕ್ಕೆ ಒಳಗಾದ ಉತ್ತರ ಪ್ರದೇಶ ಸರಕಾರ ಹಾಥರಸ್ ಪ್ರಕರಣದ ಬಳಿಕ ಪಿಎಫ್ ಐ ಜನಾಂಗೀಯ ಮತ್ತು ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಪಿತೂರಿ ನಡೆಸಿದೆ ಎಂದು ಆರೋಪ ಹೊರಿಸಿರುವುದು ನಿರಾಧಾರ ಮತ್ತು ಹಾಸ್ಯಾಸ್ಪದವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಪಿಎಫ್ ಐ ವಿರುದ್ಧ ಸುಳ್ಳು ಆರೋಪಗಳು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಆರೋಪಗಳನ್ನು ಮಾಡಿ ನ್ಯಾಯಾಲಯಗಳಲ್ಲಿ ವಿವಿಧ ಸರಕಾರಗಳು ತೀವ್ರ ಮುಖಭಂಗ ಅನುಭವಿಸಿದೆ. ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ವಿರೋಧಿ ಪ್ರತಿಭಟನೆಯ ವೇಳೆಯೂ ಉತ್ತರ ಪ್ರದೇಶದ ಪೊಲೀಸರು ಪಿಎಫ್ ಐಯ ರಾಜ್ಯ ನಾಯಕರನ್ನಯ ಮಾಸ್ಟರ್ ಮೈಂಡ್ ಗಳೆಂದು ಆರೋಪಿಸಿ ಬಂಧಿಸಿದ್ದರು. ಆದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಸಾಕ್ಷ್ಯಾಧಾರ ಸಾಬೀತುಪಡಿಸಲು ವಿಫಲವಾಗಿದ್ದು ಬಂಧಿತರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದಿಲ್ಲಿ ಗಲಭೆಗೆ ಪಿಎಫ್ ಐಯ ನಂಟು ಹೊರಿಸಿ ಸಂಘಟನೆಯ ನಾಯಕರನ್ನು ಬಂಧಿಸಿದ ಪೊಲೀಸರು ಸಾಕ್ಷ್ಯಾಧಾರ ಒದಗಿಸಲು ವಿಫಲವಾಗಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಇದೇ ರೀತಿ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಪೊಲೀಸರು, ಎನ್.ಐ.ಎ., ಸಿಬಿಐ, ಈಡಿಯನ್ನು ಬಳಸಿ ಸಂಘಟನೆಯ ವಿರುದ್ಧ ತನಿಖೆ ನಡೆಸಿದ ಬಿಜಿಪಿ ಸರಕಾರ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದೆ ನಿರಾಸೆಗೆ ಒಳಗಾಗಿದೆ ಎಂದು ಆರೋಪಿಸಿದರು.
ಪಿಎಫ್ ಐ ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿಕೊಂಡು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ನಂಬಿಕೆ ಇಟ್ಟಿರುವ ಸಂಘಟನೆಯಾಗಿದೆ. ಸುಳ್ಳು ಆರೋಪಗಳ ಮೂಲಕ ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರು ಪಿಎಫ್ ಐ ನಾಯಕರು ಮತ್ತು ಕಾರ್ಯಕರ್ತರನ್ನು ಬೇಟೆಯಾಡುವುದನ್ನು ತಕ್ಷಣ ನಿಲ್ಲಿಸಬೇಕು. ನಿರಾಧಾರವಾಗಿ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಲು ನಿವೃತ್ತ ನ್ಯಾಯಾಧೀಶರ ಮೂಲಕ ಇಡೀ ಘಟನೆಯ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನಾ ಸಭೆಯ ಬಳಿಕ ಬಂಟ್ವಾಳ ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಪಿಎಫ್ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಪಾಣೆಮಂಗಳೂರು, ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲು, ಎಸ್.ಡಿ.ಪಿ.ಐ. ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.
Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು