ಯುಪಿ ಸರಕಾರದ ಆರೋಪಗಳು ನಿರಾಧಾರ | ಪಾಪ್ಯುಲರ್ ಫ್ರಂಟ್

pfi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(08-10-2020): ಪಾಪ್ಯುಲರ್ ಫ್ರಂಟ್ ನ ವಿರುದ್ಧದ ಹೊಸ ಸುತ್ತಿನ ಆರೋಪಗಳು, ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸುವಲ್ಲಿನ ತನ್ನ ವೈಫಲ್ಯದಿಂದ ಗಮನ ಬೇರೆಡೆಗೆ ಸೆಳೆಯುವ ಉತ್ತರ ಪ್ರದೇಶದ ಸರಕಾರದ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ. ಯೋಗಿ ಅಡಿಯಲ್ಲಿ ಯುಪಿ ಜಂಗಲ್ ರಾಜ್ ಆಗಿ ಮಾರ್ಪಟ್ಟಿದ್ದು, ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.  ಈ ಹಿಂದೆ ಯುಪಿಯಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರೆಂದು ಭಾವಿಸುತ್ತಿದ್ದರು. ಆದರೆ ಇದೀಗ ರಾಜ್ಯದಲ್ಲಿ ದಲಿತರು ಮತ್ತು ಮಹಿಳೆಯರೂ ಅಸುರಕ್ಷಿತರಾಗಿದ್ದಾರೆ ಎಂದು ಪಿಎಫ್  ಐ ಹೇಳಿದೆ.

ಜನಾಂಗೀಯ ಮತ್ತು ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಪಿತೂರಿ ನಡೆಸಲಾಗಿದೆ ಎಂದು ಆರೋಪಿಸುವ ಮೂಲಕ ಪಾಪ್ಯುಲರ್ ಫ್ರಂಟ್ ಗೆ ಸಂಪರ್ಕ ಕಲ್ಪಿಸುವ ಪ್ರಯತ್ನವು ಸಂಪೂರ್ಣ ನಿರಾಧಾರವಾಗಿದೆ ಮತ್ತು ಹಾಸ್ಯಾಸ್ಪದವಾಗಿದೆ. ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ತೆರಳಿದ್ದ ನಾಲ್ಕು ಮಂದಿಯನ್ನು ದಾರಿ ಮಧ್ಯೆ ತಡೆದು ಬಂಧಿಸುವ ಮೂಲಕ ಸಂವೇದನೆಯ ಸುದ್ದಿಯನ್ನು ಸೃಷ್ಟಿಸಲಾಗಿದೆ. ಬಂಧಿತ 4 ಮಂದಿಯಲ್ಲಿ ಇಬ್ಬರು ವಿದ್ಯಾರ್ಥಿ ಸಂಘಟನೆ ಸಿ.ಎಫ್.ಐನ ನಾಯಕರು. ಸಿದ್ದೀಕ್ ಕಾಪ್ಪನ್ ಅನ್ನುವ ಮತ್ತೋರ್ವ ವ್ಯಕ್ತಿ ಪತ್ರಕರ್ತ ಹಾಗೂ ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ. ಪತ್ರಕರ್ತರ ಸಂಘ ಆತನ ಅಕ್ರಮ ಬಂಧನವನ್ನು ಈಗಾಗಲೇ ಖಂಡಿಸಿದೆ ಮತ್ತು ಈ ಅಕ್ರಮ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಗೆ ತೆರಳಿದೆ.

ಈ ಬಂಧನಗಳು ಯುಪಿಯಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಉದ್ದೇಶಿಸುವುದು ಕೂಡ ಅಪರಾಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಬಂಧನದ ನಂತರದಲ್ಲಿ ಹೊಸ ಕಥೆಗಳು, ಕೋಟ್ಯಂತರ ರೂಪಾಯಿಗಳ ವಿದೇಶೀ ನಿಧಿ ಮತ್ತು ಯೋಗಿ ಸರಕಾರದ ಹೆಸರು ಕೆಡಿಸುವ ಅಂತಾರಾಷ್ಟ್ರೀಯ ಪಿತೂರಿಯೊಂದಿಗೆ ಸೇರಿಕೊಂಡಿದೆ. ಸಿಎಎ ವಿರೋಧಿ ಪ್ರತಿಭಟನೆಯ ವೇಳೆಯಲ್ಲೂ, ಯುಪಿ ಪೊಲೀಸರು ಪಾಪ್ಯುಲರ್ ಫ್ರಂಟ್ ಯುಪಿ ರಾಜ್ಯದ ಅಡೋಕ್ ಕಮಿಟಿಯ ಸದಸ್ಯರನ್ನು ಹಿಂಸಾಚಾರದ ಮಾಸ್ಟರ್ ಮೈಂಡ್ ಗಳೆಂದು ಆರೋಪಿಸಿದ್ದರು. ಆದರೆ ಕೋರ್ಟ್ ನಲ್ಲಿ ಇದನ್ನು ಸಾಬೀತುಪಡಿಸಲು ಶೋಚನೀಯವಾಗಿ ವಿಫಲರಾಗಿದ್ದರು ಮತ್ತು ಬಂಧಿತರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂಬುದು ಇಲ್ಲಿ ಸ್ಮರಣಾರ್ಹವಾಗಿದೆ. ದಿಲ್ಲಿ ಹಿಂಸಾಚಾರದಲ್ಲಿ ಪಾಪ್ಯುಲರ್ ಫ್ರಂಟ್ ಭಾಗಿಯಾಗಿತ್ತು ಎಂಬ ಆರೋಪವು ಕೂಡ ದಿಲ್ಲಿ ಪೊಲೀಸರಿಗೆ ಮುಜುಗುರವನ್ನುಂಟು ಮಾಡಿತ್ತು. ಸುಳ್ಳು ಪ್ರಕರಣಗಳಲ್ಲಿ ದಿಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಇಬ್ಬರು ರಾಜ್ಯ ನಾಯಕರು ಒಂದೇ ದಿನದೊಳಗಾಗಿ ಕೋರ್ಟ್ ನಿಂದ ಬಿಡುಗಡೆಗೊಂಡಿದ್ದರು. ಈವರೆಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಪಾಪ್ಯುಲರ್ ಫ್ರಂಟ್ಗೆ ಸಂಬಂಧಿಸಿದ ಯಾರನ್ನೂ ದೆಹಲಿಯಲ್ಲಿ ಅಥವಾ ಯುಪಿಯಲ್ಲಿ ಬಂಧಿಸಲಾಗಿಲ್ಲ, ಇದು ಒಟ್ಟು ಆರೋಪಗಳನ್ನು ಸೃಷ್ಟಿಸಲಾಗಿದೆ ಎಂಬುದಕ್ಕೆ ಪುರಾವೆಯಾಗಿದೆ. ಅದೇ ರೀತಿ ಎನ್.ಐ.ಎ ಮತ್ತು ಈಡಿಯ ಅತ್ಯಂತ ಸಂವೇದನಾಶೀಲ ತನಿಖೆಯೂ ಕೇವಲ ಕಾಗದದ ತುಣುಕುಗಳಾಗಿಯೇ ಉಳಿದಿದ್ದು, ಅವುಗಳು ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಬಿಜೆಪಿ ಸರಕಾರದ ನಿಯಂತ್ರಣದಲ್ಲಿರುವ ಏಜೆನ್ಸಿಗಳು ಕಾಲಕಾಲಕ್ಕೆ ಪಾಪ್ಯುಲರ್ ಫ್ರಂಟ್ ನ ಹೆಸರು ಕೆಡಿಸುವ ಪ್ರಯತ್ನವನ್ನು ನಡೆಸಿವೆ. ಆದರೆ ಎಲ್ಲಾ ಆರೋಪಗಳು ಕೂಡ ಕೇವಲ ವಿಷಯಾಂತರಿಸುವ ತಂತ್ರಗಳು ಎಂದು ಸಾಬೀತಾದವು ಎಂದು ಪಿಎಫ್ ಐ ಪ್ರಕಟನೆಯಲ್ಲಿ ಹೇಳಿದೆ.

ಆರೋಪಗಳ ಈ ಹೊಸ ಸುತ್ತಿನ ಸರಣಿಯು ಕೇಂದ್ರ ಸರಕಾರದ ನೇತೃತ್ವದ ಯಂತ್ರಾಂಗದ ಉತ್ಪನ್ನವಾಗಿದ್ದು, ಇದರ ಉದ್ದೇಶವು ಯುಪಿ ಸರಕಾರದ ವರ್ಚಸ್ಸನ್ನು ರಕ್ಷಿಸುವುದಾಗಿದೆ. ಹಿಂದಿನ ಫಲಿತಾಂಶಗಳನ್ನು ಗಮನಿಸುವುದಾದರೆ, ಒಂದು ವೇಳೆ ಪೊಲೀಸರಿಂದ ಸಾಕ್ಷ್ಯಾಧಾರಗಳನ್ನು ಕೇಳಿದರೆ ಈ ಹೊಸ ಹಾಸ್ಯಾಸ್ಪದ ಮತ್ತು ಕಲ್ಪಿತ ಆರೋಪಗಳು ಕೂಡ ಪರಾಜಿತಗೊಳ್ಳಲಿವೆ ಎಂಬುದನ್ನು ನಮಗೆ ಖಚಿತವಾಗಿ ಹೇಳಬಹುದು. ದುರದೃಷ್ಟವಶಾತ್, ಆರೋಪಗಳನ್ನು ಸಂವೇದನಾಶೀಲವಾಗಿ ತೋರಿಸುವ ಅದೇ ಮಾಧ್ಯಮಗಳು, ಆರೋಪಗಳು ಸುಳ್ಳೆಂದು ಸಾಬೀತಾದ ಬಳಿಕ ಮೌನ ವಹಿಸುತ್ತದೆ. ಯುಪಿ ಪೊಲೀಸರು ತಮ್ಮ ಪ್ರತಿಪಾದನೆಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾದಾಗ, ಮಾಧ್ಯಮಗಳು ಮೊದಲಿಗಿಂತ ವಿಭಿನ್ನವಾಗಿ ಪ್ರತಿಕ್ರಿಯಿಸುವವು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಪಿಎಫ್ ಐ ಹೇಳಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು