ಶ್ರೀನಗರ(26-10-2020): ರಾಷ್ಟ್ರಧ್ವಜವನ್ನು ಒಪ್ಪಿಕೊಳ್ಳಲಾರೆ ಎಂದ ಪಿಡಿಪಿ ನೇತಾರೆ ಮೆಹಬೂಬ ಮುಫ್ತಿ ಜೊತೆಯಲ್ಲಿ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಕಾರಣ ಕೊಟ್ಟು, ಮೂವರು ಮುಖಂಡರು ಪಕ್ಷ ತ್ಯಜಿಸಿದ್ದಾರೆ. ಟಿ.ಎಸ್. ಬಜ್ವಾ, ಹಸನ್ ಅಲಿ ವಫ್ಫಾ, ಬೆಡ್ ಮಹಾಜ್ ಎಂಬವರೇ ಪಕ್ಷ ತ್ಯಜಿಸಿದವರು.
ಕೇಂದ್ರ ಸರಕಾರವು ಜಮ್ಮುಕಾಶ್ಮೀರದ ಆಂತರಿಕ ಸ್ವಾಯುತ್ತೆಯನ್ನು ಪ್ರತಿಪಾದಿಸುವ ಆರ್ಟಿಕಲ್ 370 ರದ್ದುಗೊಳಿಸಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಬಳಿಕ ಮಹಬೂಬ ಮುಫ್ತಿಯೂ ಸೇರಿದಂತೆ ಅಲ್ಲಿನ ಹಲವು ರಾಜಕೀಯ ನಾಯಕರನ್ನು ಬಂಧನದಲ್ಲಿರಿಸಿತ್ತು.
ಇತ್ತೀಚೆಗಷ್ಟೇ ಬಿಡುಗಡೆಗೊಂಡ ಮೆಹಬೂಬ, ಕೇಂದ್ರ ಸರಕಾರದ ವಿರುದ್ಧ ನಿರಂತರ ಟೀಕೆಗಳನ್ನು ಮಾಡುತ್ತಾ ಬಂದಿದ್ದರು. ಜೊತೆಗೆ ಕಾಶ್ಮೀರದ ಸ್ವಾಯುತ್ತೆಯನ್ನು ಪುನಃಸ್ಥಾಪಿಸುವ ವರೆಗೆ ಭಾರತದ ರಾಷ್ಟ್ರಧ್ವಜವನ್ನು ಅಂಗೀಕರಿಸುವುದಿಲ್ಲವೆಂಬ ಹೇಳಿಕೆಯನ್ನೂ ನೀಡಿದ್ದರು.
ರಾಷ್ಟ್ರಧ್ವಜದ ಕುರಿತು ಮೆಹಬೂಬರವರ ಈ ಹೇಳಿಕೆಯು ದೇಶಪ್ರೇಮವನ್ನು ಘಾಸಿಗೊಳಿಸುವಂಥದ್ದು ಎಂಬ ಕಾರಣ ನೀಡಿ, ಪಕ್ಷದ ಮೂವರು ನೇತಾರರು ಮೆಹಬೂಬ ಮುಫ್ತಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಎಲ್ಲಾ ರಾಜಕೀಯ ನೇತಾರರೊಂದಿಗೆ ಮೈತ್ರಿ ಮಾಡಿ ಕೇಂದ್ರ ಸರಕಾರದ ವಿರುದ್ಧ ಹೊಸ ಹೋರಾಟವನ್ನು ರೂಪಿಸಲು ಮುಂದಾಗಿರುವ ಮುಫ್ತಿಗೆ ಈ ಬೆಳವಣಿಗೆಯು ಒಂದು ಹಿನ್ನೆಡೆಯಾಗಿದೆ.