ಜಿದ್ದಾ(13-11-2020): ಜಾಗತಿಕ ತೈಲ ಬೆಲೆಯಲ್ಲಿ ಏರಿಕೆಯಾಗದ ಹಿನ್ನೆಲೆಯಲ್ಲಿ, ಇನ್ನಷ್ಟು ಕುಸಿಯದಂತೆ ನೋಡಿಕೊಳ್ಳಲು ತೈಲೋತ್ಪಾದಕ ದೇಶಗಳು ನಿರ್ಧರಿಸಿವೆ. 2022ರ ಕೊನೆಯವರೆಗೂ ತೈಲೋತ್ಪಾದನೆಯ ಮೇಲಿನ ನಿಯಂತ್ರಣವನ್ನು ಮುಂದುವರಿಸಲು ತೈಲೋತ್ಪಾದಕ ದೇಶಗಳ ನಡುವೆ ಸಹಮತ ಸಾಧಿಸಿರುವುದಾಗಿ ಸೌದಿ ಇಂಧನ ಸಚಿವಾಲಯ ತಿಳಿಸಿದೆ.
ಕೊರೋನಾ ಸಾಂಕ್ರಾಮಿಕ ರೋಗವು ತೈಲೋತ್ಪಾದನೆಯನ್ನೂ ಬಾಧಿಸಿತ್ತು. ಕಚ್ಚಾ ತೈಲಕ್ಕೆ ಬೇಡಿಕೆ ಕುಂಠಿತಗೊಂಡು, ಬೆಲೆ ಇಳಿಕೆಯಾಗಿತ್ತು. ಇದು ಪೆಟ್ರೋಲಿಯಂ ಉತ್ಪಾದನೆಯನ್ನೇ ಪ್ರಮುಖ ಆದಾಯ ಮೂಲವಾಗಿರುವ ದೇಶಗಳ ಆತಂಕಕ್ಕೆ ಕಾರಣವಾಗಿತ್ತು. ಇದಕ್ಕಾಗಿ ತೈಲೋತ್ಪಾದಕ ದೇಶಗಳು, ತೈಲೇತರ ಆದಾಯ ಮೂಲಗಳನ್ನು ಸೃಷ್ಟಿಸಲು ಹರಸಾಹಸಪಡುತ್ತಿದೆ.
ಕೊರೋನಾ ವ್ಯಾಕ್ಸಿನ್ ಬಂದರೆ ತೈಲಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದ್ದರೂ, ಅದು ಅಷ್ಟು ಶೀಘ್ರದಲ್ಲಿ ಚೇತರಿಕೆ ಕಂಡು ಬರುವುದಿಲ್ಲವೆಂದು ತಜ್ಞರು ಅಭಿಪ್ರಾಯಟ್ಟಿದ್ದಾರೆ. ಸದ್ಯ ಕಚ್ಛಾತೈಲದ ಸರಾಸರಿ ಬೆಲೆ ನಲ್ವತ್ತು ಡಾಲರ್ ಇದೆ.