ನವದೆಹಲಿ(26-11-2020): ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಬಗ್ಗೆ ಮಾತನಾಡಿದ್ದು, ಕೆಲವು ತಿಂಗಳಿಗೊಮ್ಮೆ ಮತದಾನ ನಡೆಯುತ್ತಿರುವುದರಿಂದ ಇದು ಭಾರತದ ಅವಶ್ಯಕತೆಯಾಗಿದೆ ಎಂದು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ 80 ನೇ ಅಖಿಲ ಭಾರತ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, 26/11 ಮುಂಬೈ ದಾಳಿಯ ಸಂತ್ರಸ್ತರಿಗೆ ಗೌರವ ಸಲ್ಲಿಸಿದರು ಮತ್ತು ಹೊಸ ನೀತಿ ಮತ್ತು ಹೊಸ ಪ್ರಕ್ರಿಯೆಯೊಂದಿಗೆ ಭಾರತ ಈಗ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಎಂದು ಪ್ರತಿಪಾದಿಸಿದರು. ಕೆಲವು ತಿಂಗಳಿಗೆ, ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಮಸ್ಯೆ ಬಗ್ಗೆ ಅಧ್ಯಯನ ನಡೆಯಬೇಕಿದೆ ಎಂದು ಹೇಳಿದರು.
21 ನೇ ಶತಮಾನದಲ್ಲಿ ಸವಾಲುಗಳ ವಿರುದ್ಧ ಹೋರಾಡಲು ಸಂವಿಧಾನವು ನಮ್ಮ ಮಾರ್ಗದರ್ಶಕ ಬೆಳಕು ಮತ್ತು ಪ್ರತಿ ನಿರ್ಧಾರಕ್ಕೂ ರಾಷ್ಟ್ರೀಯ ಹಿತಾಸಕ್ತಿ ನಮ್ಮ ಆಧಾರವಾಗಿರಬೇಕು. ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ನಮ್ಮ ಸಂವಿಧಾನವು ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ ಆದರೆ ಒಂದು ವಿಶೇಷ ಲಕ್ಷಣವೆಂದರೆ ಕರ್ತವ್ಯಗಳಿಗೆ ನೀಡಲಾಗಿರುವ ಪ್ರಾಮುಖ್ಯತೆ. ಮಹಾತ್ಮ ಗಾಂಧಿಯವರು ಈ ಬಗ್ಗೆ ಬಹಳ ಉತ್ಸುಕರಾಗಿದ್ದರು. ಹಕ್ಕುಗಳು ಮತ್ತು ಕರ್ತವ್ಯಗಳ ನಡುವೆ ನಿಕಟ ಸಂಬಂಧವನ್ನು ಅವರು ಕಂಡರು. ನಾವು ಒಮ್ಮೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಹಕ್ಕುಗಳು ಸ್ವಯಂಚಾಲಿತವಾಗಿ ರಕ್ಷಿಸಲ್ಪಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು ಎಂದು ಮೋದಿ ಹೇಳಿದರು.