ಓಣಂ ಎಂಬ ಕೌಂಟರ್ ಸಂಸ್ಕೃತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

-ಹರೀಶ್ ಎಂ ಜಿ

ಮಾಂಸ, ಬೀಡಿ, ಹೆಂಡ ಪ್ರಿಯಾರಾದ, ಕಾಡಿನಲ್ಲೋ, ಮರದ ಕೆಳಗೋ, ಗುಡಿಯೊಳಗಗೋ ವಾಸಿಸುತ್ತಿದ್ದ, ಎಲ್ಲರಿಂದ ಪೂಜೆ, ಜಳಕ ಮಾಡಿಸಿಕೊಂಡು ಮುದ್ದಿಸಿಕೊಳ್ಳುತ್ತಿದ್ದ ಬುಡಕಟ್ಟು ಜನಾಂಗದ, ಕೆಳ ಜಾತಿಯ, ಜನ ಸಾಮಾನ್ಯರ, ನಮ್ಮೆಲ್ಲರ ಸಣ್ಣ ಪುಟ್ಟ ದೇವರುಗಳು ಇಂದು ಕಣ್ಮರೆಯಾಗಿದ್ದಾರೆ. ನಾವು ಆರ್ಯನ್ ದೇವರುಗಳಾದ, ದ್ರಾವಿಡರಲ್ಲದ ರಾಮ ಕೃಷ್ಣರನ್ನ ಪೂಜೆ ಮಾಡತೊಡಗಿದ್ದೇವೆ. ದೊಡ್ಡ ದೊಡ್ಡ ದೇವಸ್ಥಾನಗಳ ಗರ್ಭಗೃಹದಲ್ಲಿ ಬಂಧಿಯಾದ, ವೈದಿಕ ಪೂಜಾ ವಿಧಿವಿಧಾನಗಳ ಸಂಕೋಲೆ ತೊಟ್ಟ ಬ್ರಾಹ್ಮಣ್ಯದ ದೇವರುಗಳ ದರ್ಶನಕ್ಕೆ ಗಂಟೆಗಟ್ಟಲೆ ಸಾಲುಗಳಲ್ಲಿ ಕಾಯುತ್ತೇವೆ. ಅಡ್ವಾನ್ಸ್ ಬುಕಿಂಗ್ ಮಾಡುತ್ತೇವೆ. ದೀಪವಾಳಿ, ವೈಕುಂಟ ಏಕಾದಶಿ, ವರಮಹಾಲಕ್ಷ್ಮಿ ಹಬ್ಬಗಳನ್ನ ಆಚರಿಸತೊಡಗಿದ್ದೇವೆ. ಇದೆಕೆಲ್ಲಾ ಒಂದು abberation ಅನ್ನುವಂತೆ ಕೇರಳದಲ್ಲಿ ಓಣಂ ಆಚರಿಸಲಾಗತ್ತೆ.

ಓಣಂ ಮಲಯಾಳಿಗಳಿಗೆ ಮಹಾರಾಜ ಬಲಿಯನ್ನು ಅನಂದೊಲ್ಲಾಸದಿಂದ ಬರಮಾಡಿಕೊಳ್ಳುವ ದಿನ. ಬಲಿ ಎಂದರೆ ಬಲ ಅಂತಲೇ ಅರ್ಥ. ಆತ ಬಲಶಾಲಿಯಾದರು ಜನರ ಶೋಷಣೆ ಮಾಡದ ರಾಜ. ವಿರೋಚನನ ಮಗನಾದ, ಪ್ರಹ್ಲಾದನ ಮೊಮ್ಮಗನಾದ ಹಾಗು ವಿಷ್ಣುವಿನ ನಾಲ್ಕನೇಯ ಅವತಾರವಾದ ನರಸಿಂಹನಿಂದ ಹತನಾದ ಹಿರಣ್ಯಕಶಿಪುವಿನ ಮರಿಮಗನಾದ ಬಲಿ ವಾಮನನಂತೆ ಕುಯುಕ್ತಿಯಿಂದ ಕೊಲ್ಲುವವನಲ್ಲ. ವಾಮನನ ಪಿತೂರಿಯನ್ನರಿತ ಗುರುಗಳಾದ ಶುಕ್ರಚಾರ್ಯರ ಸಲಹೆಗಳನ್ನ, ಪ್ರಹ್ಲಾದನ ಮಾತುಗಳನ್ನ ಕೇಳದೆ ಕೊಟ್ಟ ಮಾತಿಗೆ ತಪ್ಪದೆ ಜೀವ ತೆತ್ತ ರಾಜ ಬಲಿ.

ಬಲಿಮಹಾರಾಜನ ಆಳ್ವಿಕೆಯ ಸಮಯದಲ್ಲಿ ಜನ ಆನಂದಿದ್ದರು, ಚಾತುರ್ವರ್ಣ್ಯಕ್ಕೆ ಆದ್ಯತೆ ಇರಲಿಲ್ಲ. ಸಮಾಜ ಜಾತಿ ಆಧಾರಿತವಾಗಿ ವಿಭಜಿಸಿರಲಿಲ್ಲ, ಎಲ್ಲವು ಸುಭಿಕ್ಷ, ಎಲ್ಲರು ಅನ್ಯೂನ್ಯ. ಬ್ರಾಹ್ಮಣರ ಪಂತ ಪಂಗಡಗಳ ಬೇರ್ಪಡುಗೆ ಸಹಿಸುವಷ್ಟು ತಾಳ್ಮೆ ಅವನಿಗಿರಲಿಲ್ಲ. ಶ್ರಮಣರು/ದಲಿತರು ಬೌದ್ಧಿಕವಾಗಿ ಅಧಮರು ಎಂದು ಬ್ರಾಹ್ಮಣರು ಹರಡಿದ್ದ ಸಿದ್ದಾಂತಗಳನ್ನ ಆತ ತಳ್ಳಿಹಾಕಿದ. ಈ ರೀತಿಯ “ಸಬ್ಕಾ ಸಾತ್ ಸಬ್ಕಾ ವಿಕಾಸ್” ಸೂತ್ರವನ್ನ ನಂಬಿ ಆಳ್ವಿಕೆ ನಡೆಸುತ್ತಿದ್ದ ಬಲಿಮಹಾರಾಜನನ್ನು ಕೊಲ್ಲಲು ಮಹಾ ಸಂಚನ್ನೇ ಸುರರು ಮಾಡಬೇಕಾಯಿತು.

ಒಂದು ಸಾವಿರ ವರುಷ ಅದಿತಿಯ ಗರ್ಭದಲ್ಲಿರುವ ವಾಮನ, ಬಲಿಮಹಾರಾಜನನ್ನ ಕೊಲ್ಲಲು ಸುದೀರ್ಘವಾದ ತಪಸ್ಸನ್ನೇ ಮಾಡುತ್ತಾನೆ. ಕುಬ್ಜ ಬ್ರಾಹ್ಮಣನಾಗಿ ಬಲಿಮಹಾರಾಜನ ಆಸ್ಥಾನಕ್ಕೆ ಬಂದು, ಭಿಕ್ಷೆ ಬೇಡಿ ಮೋಸದಿಂದ ಬಲಿಯನ್ನು ಕೊಲ್ಲಬೇಕಾಗುತ್ತದೆ. ಸಾಯುವ ಕೊನೆಯ ಕ್ಷಣಗಳಲ್ಲಿ ವಾಮನನನ್ನು ಕುರಿತು ಬಲಿ ಹೀಗೆ ಹೇಳುತ್ತಾನೆ:

“ಸತ್ಯ ಮತ್ತು ನ್ಯಾಯಕ್ಕೆ ವಿರುದ್ದವಾದ ಕೆಲಸವನ್ನೇ ನೀನು ಮಾಡಿದ್ದೀಯ. ನೀನು ವ್ಯಕ್ತಿಯನ್ನ ಕೊಲ್ಲಬಹುದೇ ಹೊರತು ಅವನ ಸಿದ್ದಾಂತಗಳನ್ನಲ್ಲ. ನಾನು ಜನಪ್ರಿಯಗೊಳಿಸಿದ ಸಿದ್ದಾಂತ ಹಾಗೆ ಉಳಿಯತ್ತೆ, ಜನ ಅದನ್ನ ಪಾಲಿಸುತ್ತಾರೆ ಹಾಗು ಮುಂದೆ ಅದೇ ಜನ ನನ್ನನ್ನು ಆರಾಧಿಸುತ್ತಾರೆ” ಎಂದ.

ತನ್ನ ಮೋಸದಿಂದ ಮುಜುಗರಗೊಂಡ ವಾಮನ/ವಿಷ್ಣು ಬಲಿಮಹಾರಾಜನಿಗೆ ಎಲ್ಲ ಪ್ರಾಪಂಚಿಕ ಸುಖಗಳನ್ನ ದಯಪಾಲಿಸಿ ಅವನ ಸೇವಕನಾಗಿರಲು ನಿರ್ಧರಿಸುತ್ತಾನೆ.

ಯಾವುದೇ ದ್ವೇಷ ಅಸೂಹೆ ಅಹಂಕಾರಗಳಿಲ್ಲದೆ ಒಳ್ಳೆಯ ಆಡಳಿತ ನೀಡಿದ ಬಲಿಮಹಾರಾಜನ ಪುನಾರಗಮನದ ದಿನವೇ ಓಣಂ. non-ಆರ್ಯನ್ ದೇವರಾದ ಶಿವನ ಭಕ್ತನಾದ ಬಲಿಮಹಾರಾಜನನ್ನ ಬರಮಾಡಿಕೊಳ್ಳುವ ಓಣಂಗಿಂತ ದೊಡ್ಡ ಹಬ್ಬ ಕೇರಳದಲ್ಲಿ ಇನ್ನೊಂದಿಲ್ಲ. ಪ್ರೀತಿಯಿಂದ ಮಾವೇಲಿ ಎಂದು ಕರೆಸಿಕೊಳ್ಳುವ ಬಲಿಯ ಆಳ್ವಿಕೆಯ ಕಾಲದ ಅರ್ಥಿಕ ಹಾಗು ಸಾಮಾಜಿಕ ಸಮಾನತೆ, ಸುಳ್ಳು ಮೋಸಗಳಿಲ್ಲದ ಸುಭಿಕ್ಷ ನಾಡನ್ನ ನಂತರದ ರಾಜರು ಬ್ರಾಹ್ಮಣ್ಯದಲ್ಲಿ ಮುಳುಗಿಸಿಬಿಟ್ಟರು. ಶ್ರೇಣಿಕೃತ ವರ್ಗ, ಜಾತಿ ಅಸಮಾನತೆಯನ್ನ ಜಾರಿಗೆ ತಂದು ಹಲವರನ್ನು ದಬ್ಬಾಳಿಕೆಕ್ಕೊಳಪಡಿಸಿದರು.

ಜಾತಿ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡ ಫುಲೆ ಬಲಿಮಹಾರಾಜನನ್ನು ಸರಿಯಾಗಿಯೇ ಕ್ರೈಸ್ತನಿಗೆ ಹೋಲಿಕೆ ಮಾಡಿದ್ದಾರೆ. ಬ್ರಾಹ್ಮಣ್ಯಕ್ಕೆ ವೈದಿಕ ಪರಂಪರೆ ಸಂಸ್ಕೃತಿಗಳಿಗೆ ಪರ್ಯಾಯವೊಂದನ್ನ ಸೃಷ್ಟಿಸಿದ, ಯಾರನ್ನು ಅಂಧ ಅನುಕರಣೆ ಮಾಡದೆ, ದಕ್ಷ ಜನಪರ ಆಡಳಿತ ನೀಡಿದ ಮಹಾರಾಜ ಮಾವೇಲಿ ಎಂದು ಫುಲೆ ಪ್ರಶಂಸಿಸುತ್ತಾರೆ.

ಕೇರಳಕ್ಕೆ ಇಂದೂ ಕೂಡ ತುಂಬಾ ವೈವಿದ್ಯಮಯ, ಬೆರಗುಗೊಳಿಸುವಂತಹ ಆಧ್ಯಾತ್ಮಿಕ ಪರಂಪರೆ ಇದೆ. ಮಾಂಸ, ಬೀಡಿ, ಹೆಂಡ ಎಲ್ಲವು ದೇವರ ನೈವೇದ್ಯದಲ್ಲಿ ಬಳಕೆಯಾಗುತ್ತವೆ. ಚಥನ್, ಹಿರಿಕನಾದ ಮುತ್ತಾಪ್ಪನ, ಕೌರವ ಜೇಷ್ಠ ಸುಯೋಧನ, ಕಾಳಿ, ಕುರುಂಬ, ಕೊಟ್ಟವೈ ಇಲ್ಲಿ ಮುಖ್ಯ ದೇವತೆಗಳಾಗುತ್ತಾರೆ. ಇಲ್ಲಿ ಕೃಷ್ಣನೂ ಕೂಡ ಬುಡಕಟ್ಟು ಜನಾಂಗದ ನಾಯಕ ಗುರುವಾಯೂರಪ್ಪನ್ನ ಆಗಿಬಿಡುತ್ತಾನೆ.

ಇಂತಹ ಸಣ್ಣ ಸಣ್ಣ ವಿಭಿನ್ನ ಸಂಸ್ಕೃತಿ, ಪರಂಪರೆ, ಆಚರಣೆಗಳನ್ನ ಸ್ವಾಧೀನ- ಅನ್ವರ್ಥಮಾಡಿಕೊಂಡು ಬ್ರಾಹ್ಮಣ ಆರ್ಯನ ಸಂಸ್ಕೃತಿಯನ್ನ ಬಲವಂತವಾಗಿ ಹೇರುವ ಕ್ರಿಯೆ ಹಿಂದುತ್ವವಾದಿಗಳಿಂದ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಆದರೆ ಸಣ್ಣ ಸಣ್ಣ ಊರ ದೇವರುಗಳನ್ನ, ಭೂತಗಳನ್ನ, ಹಿರಿಕರುಗಳನ್ನ ಮರೆತು ಹಿಂದುತ್ವವನ್ನು ಅಪ್ಪಿಕೊಂಡ ಕರ್ನಾಟಕ ಬಹು ಮಂದಿಗಳಂತೆ ಅಯೋಧ್ಯ ರಾಮನನ್ನ, ಮಥುರೆಯ ಕೃಷ್ಣನನ್ನ ಅಥವಾ ಕಾಶಿ ವಿಶ್ವನಾಥನನ್ನ ಒಪ್ಪಿಕೊಳುವ ಜನ ಮಲಯಾಳಿಗಳಲ್ಲ. ಕೇರಳದಲ್ಲಿ ಓಣಂ ಆಚರಣೆ ಇರುವವರೆಗೂ ಆರ್ಯನ ದೇವರುಗಳಿಗೆ, ಹಿಂದುತ್ವ ಸಿದ್ದಾಂತಗಳಿಗೆ ಜಾಗವಿಲ್ಲ.

“ಅಸುರರು, ದೇವರು, ರಾಕ್ಷಸರು, ಋಷಿಗಳು ಗಂಧರ್ವರು ಎಲ್ಲರು ಸಾಧಾರಣ ಜನರೇ ಆಗಿದ್ದರು. ಸಾಂಸ್ಕೃತಿಕ ಪ್ರಾಬಲ್ಯಕ್ಕಾಗಿ ಪುರಾಣ ವೇದಗಳ ಮೂಲಕ ಅಸುರರ, ರಾಕ್ಷಸರನ್ನ ದುಷ್ಟರೆಂದು, ಉದ್ದಕೋರೆಹಲ್ಲಿನ್ನ ಮಾಂಸಪ್ರಿಯರೆಂದು, ಕುರೂಪಿಗಳೆಂದು ಬ್ರಾಹ್ಮಣರು ಚಿತ್ರಿಸಿದರು. ಎಂಟನೆ ಶತಮಾನದಿಂದಿಚೆಗೆ ಕಟ್ಟಲಾದ ದೇವಸ್ಥಾನಗಳಲ್ಲಿ ಚಿತ್ರ ವಿಚಿತ್ರವಾಗಿ ಅವರ ಶಿಲೆಗಳನ್ನ ಕೆತ್ತಿಸಿದರು.” (ಅಂದು ಅವರು ಬಿಂಬಿಸಿದ ಕುರೂಪಿ ಚಿತ್ರಗಳು ಇಂದಿಗೂ ನಮ್ಮ ಅಮರಚಿತ್ರ ಕಥಾ, ಬಾಹುಬಲಿಗಳಂತಹ ಚಲನಚಿತ್ರದವರೆಗೆ ಮುಂದುವರೆದುಕೊಂಡು ಬಂದಿದೆ!) ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಮೇಲಿನ ಮಾತುಗಳನ್ನ ನಾವುಗಳು ಪದೆಪದೆ ನೆನಪಿಸಿಕೊಳ್ಳಬೇಕಿದೆ.

ಹಿಂದುತ್ವವನ್ನ ಹಿಮ್ಮೆಟ್ಟಿಸಲು ಯಾವುದೇ ಬಲಿಷ್ಠ ರಾಜಕೀಯ ಪಕ್ಷ ಅಥವಾ ಪರ್ಯಾಯ ಸಿದ್ದಾಂತ ಬೇಡ. ನಮಗೆ ಬೇಕಾಗಿರುವುದು ಬ್ರಾಹ್ಮಣ್ಯದಿಂದ ಮತ್ತದರ ಗ್ರ್ಯಾಂಡ್ ನರೇಟಿವ್ಗಳಿಂದ ನಮ್ಮನ್ನು ಪಾರುಮಾಡುವ ಕೌಂಟರ್ ಸಂಸ್ಕೃತಿಗಳು, alternative ನರೆಟಿವ್ಗಳು, ಆಚರಣೆಗಳು, ಊರು ದೇವರುಗಳ ಕುರಿತಾದ ಅಧ್ಯಾಯನಗಳು, ಆ ಅಧ್ಯಾಯನದಿಂದ ಬಂದ ಅರಿವು ಆ ಊರಿನವರಿಗೆಲ್ಲಾ ತಿಳಿಸುವುದು, ನಮ್ಮ ಹಿರಿಕರ ಜೀವನ ಶೈಲಿ, ಮೌಲ್ಯ ಮತ್ತವರ ನಂಬಿಕೆಗಳ ಮೇಲೆ ಬೆಳಕಚೆಲ್ಲುವುದು, ನಮ್ಮ ಬೇರುಗಳ ಹುಡುಕಾಟ, ಈ ದೇಶದೊಳಗಿನ ಹಲವು ದೇಶಗಳ ಅನಾವರಣ. ಮಲಯಾಳಿಗಳು ತಮ್ಮ ಬೇರುಗಳನ್ನ ಸಡಿಲಗೊಳಿಸಿ ಎನ್ನನ್ನೋ ಹರಸಿ ಬಳ್ಳಿಯಾಗಿ ಮೇಲೆ ಹರಡಲು ಪ್ರಯತ್ನಿಸಿಲ್ಲ. ಅವರು ತಮ್ಮತನ, ಸ್ವಾಭಿಮಾನ ಉಳಿಸಿಕೊಂಡಿದ್ದಾರಷ್ಟೇ…

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು