ಭುವನೇಶ್ವರ(06-11-2020): ಸರ್ಕಾರಿ ಆಸ್ಪತ್ರೆಯಿಂದ ತಾಯಿಯ ಮೃತದೇಹವನ್ನು 2ಕಿ.ಮೀ ದೂರದವರೆಗೆ ಪುತ್ರನೋರ್ವ ಹೊತ್ತುಕೊಂಡು ಹೋಗುತ್ತಿರುವ ದಯಾನೀಯ ದೃಶ್ಯಕ್ಕೆ ಒಡಿಶಾದ ಗಂಜಾಂ ಜಿಲ್ಲೆಯ ಸೊರಡಾ ಗ್ರಾಮ ಸಾಕ್ಷಿಯಾಯಿತು.
ಒಡಿಶಾದ ಗಂಜಾಂ ಜಿಲ್ಲೆಯ ಸೊರಡಾ ಬ್ಲಾಕ್ನ ಕೆಳಗಿರುವ ಬಡಗಡ ಗ್ರಾಮದ ನಿವಾಸಿ ಲಕ್ಷ್ಮಿ ಗೌಡಾ ಅವರು ಉಸಿರಾಟದ ತೊಂದರೆಯಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್ಸಿ) ಬುಧವಾರ ದಾಖಲಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಅವರು ನಿಧನರಾದರು.
ಶವವನ್ನು ತಮ್ಮ ನಿವಾಸಕ್ಕೆ ಕೊಂಡೊಯ್ಯಲು ವ್ಯಾನ್ ಒದಗಿಸುವಂತೆ ಆಸ್ಪತ್ರೆಯ ಅಧಿಕಾರಿಗಳನ್ನು ಕೇಳಿದಾಗ, ಅಧಿಕಾರಿಗಳು ಅವರ ಕೋರಿಕೆಗೆ ಯಾವುದೇ ಸ್ಪಂದಿಸಿಲ್ಲ. ಆದರೆ ಆಸ್ಪತ್ರೆಯ ಅಧಿಕಾರಿಗಳು ಕೂಡಲೇ ಮೃತದೇಹವನ್ನು ಸ್ಥಳಾಂತರಿಸಲು ಒತ್ತಾಯಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಅವರು ಆಟೋರಿಕ್ಷಾವನ್ನು ಬಾಡಿಗೆಗೆ ಪಡೆಯಲು ಪ್ರಯತ್ನಿಸಿದರು, ಆದರೆ ಕೋವಿಡ್ -19 ನಿಂದ ಮೃತಪಟ್ಟಿರಬಹುದೆಂದು ಶಂಕಿಸಿ ದೇಹವನ್ನು ಸಾಗಿಸಲು ಯಾರೂ ಒಪ್ಪಲಿಲ್ಲ ಎಂದು ಅವರು ಹೇಳಿದರು.
ಇದರಿಂದಾಗಿ ದಿಕ್ಕು ತೋಚದೆ ತಾಯಿಯ ಮೃತದೇಹವನ್ನು ಬಸಂತ್ ಎಂಬಾತ ಹೆಗಲ ಮೇಲೆ ಎರಡು ಕಿಲೋಮೀಟರ್ ದೂರದ ಹಳ್ಳಿಗೆ ಹೊತ್ತುಕೊಂಡು ಸಾಗಿದ್ದಾನೆ.