ನವದೆಹಲಿ(25-10-2020): ಸಿಎಎ ಮತ್ತು ಎನ್ಆರ್ಸಿ ಗಳನ್ನು ಯಾವ ಉದ್ದೇಶಕ್ಕಾಗಿ ಜಾರಿಗೆ ತರಲಾಗುತ್ತಿದೆ ಎಂಬ ಬಿಜೆಪಿ ಮಾತೇ ಆಡುತ್ತಿಲ್ಲ ಎಂದು ಎಐಎಮ್ಐಎಮ್ ಅಧ್ಯಕ್ಷ ಅಸದುದ್ದೀನ್ ಉವೈಸಿ ಹೇಳಿದ್ದಾರೆ. ಸಿಎಎ, ಎನ್ಆರ್ಸಿ ವಿಷಯದಲ್ಲಿ ಮುಸ್ಲಿಮರನ್ನು ದಾರಿ ತಪ್ಪಿಸಲಾಗಿದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಉವೈಸಿ ಈ ರೀತಿ ಹೇಳಿದ್ದಾರೆ.
“ಎನ್ಆರ್ಸಿ, ಸಿಎಎ ವಿಚಾರದಲ್ಲಿ ಮುಸ್ಲಿಮರನ್ನು ದಾರಿ ತಪ್ಪಿಸಲು, ಮುಸ್ಲಿಮರೇನು ಸಣ್ಣ ಮಕ್ಕಳಲ್ಲ. ಸಿಎಎ, ಎನ್ಆರ್ಸಿ ಗಳನ್ನು ಯಾಕಾಗಿ ಜಾರಿ ಮಾಡಲಾಗುತ್ತದೆ ಎನ್ನುವ ಬಗ್ಗೆ ಒಂದೇ ಒಂದು ಅಕ್ಷರವನ್ನೂ ಬಿಜೆಪಿ ಮಾತಾಡಿಲ್ಲ. ಒಂದು ವೇಳೆ ಇವು ಮುಸ್ಲಿಮರ ವಿರುದ್ಧ ಅಲ್ಲದಿದ್ದರೆ, ಕಾಯ್ದೆಯಲ್ಲಿರುವ ಧಾರ್ಮಿಕ ನೆಲೆಗಟ್ಟಿನ ಅಂಶಗಳನ್ನು ಕಿತ್ತು ಹಾಕಬೇಕು. ನಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ಕಾನೂನು ಇರುವವರೆಗೂ ನಾವು ಮತ್ತೆ ಮತ್ತೆ ಹೋರಾಡುತ್ತಲೇ ಇರುತ್ತೇವೆ, ಎನ್ನುವುದನ್ನು ನೀವು ತಿಳಿದುಕೊಳ್ಳಿ .” ಎಂದು ಉವೈಸಿ ಟ್ವೀಟ್ ಮಾಡಿದ್ದಾರೆ.
ಸಿಎಎ ಯಾವುದೇ ಸಮುದಾಯದ ವಿರೋಧಿ ಅಲ್ಲವೆಂದೂ, ಈ ವಿಚಾರದಲ್ಲಿ ಮುಸ್ಲಿಮರನ್ನು ದಾರಿತಪ್ಪಿಸಲಾಗಿದೆಯೆಂದೂ, ಪ್ರತಿಭಟನೆಯ ಹೆಸರಿನಲ್ಲಿ ದೇಶದಲ್ಲಿ ಪೂರ್ವಯೋಜಿತ ಹಿಂಸಾಚಾರ ನಡೆಸಲಾಗಿದೆಯೆಂದೂ ಮೋಹನ್ ಭಾಗವತ್ ಹೇಳಿಕೆ ನೀಡಿದ್ದರು.