ನವದೆಹಲಿ(26-02-2021): ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನದೀಪ್ ಕೌರ್ ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಕಂಪನಿಯೊಂದರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಹರಿಯಾಣದ ಸೋನಿಪತ್ನಲ್ಲಿ ಬಂಧಿಸಲ್ಪಟ್ಟ ಆರು ವಾರಗಳ ನಂತರ ಈ ಆದೇಶ ಹೊರ ಬಂದಿದೆ. ನದೀಪ್ ಕೌರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆ.
ನದೀಪ್ ಕೌರ್ ಗೆ ಹೈಕೋರ್ಟ್ ಜಾಮೀನು ನೀಡಿದೆ ಎಂದು ವಕೀಲ ಹರ್ಷ್ದೀಪ್ ಸಿಂಗ್ ಚೀಮಾ ಅವರು ಹೇಳಿದ್ದಾರೆ.
ಜಾಮೀನು ಅರ್ಜಿಯಲ್ಲಿ, 23 ವರ್ಷದ ಕೌರ್ ಜನವರಿ 12 ರಂದು ಸೋನಿಪತ್ ಪೊಲೀಸರು ಅವರನ್ನು ಬಂಧಿಸಿದ ನಂತರ ಪೊಲೀಸ್ ಠಾಣೆಯಲ್ಲಿ ತೀವ್ರವಾಗಿ ಥಳಿಸಿದ್ದಾರೆಂದು ಆರೋಪಿಸಿದ್ದಾರೆ. ಪೊಲೀಸರು ಈ ಆರೋಪವನ್ನು “ಆಧಾರರಹಿತ” ಎಂದು ನಿರಾಕರಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) 307 (ಕೊಲೆ ಯತ್ನ) ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದಾಖಲಾದ ಎಫ್ಐಆರ್ನಲ್ಲಿ ಆಕೆಯನ್ನು ತಪ್ಪಾಗಿ ಬಂಧಿಸಲಾಗಿದೆ ಎಂದು ಕೌರ್ ಹೇಳಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನಕ್ಕೆ ಅವರು ಬೆಂಬಲ ನೀಡಿದ್ದರಿಂದ ಆಕೆಯನ್ನು ಗುರಿಯಾಗಿಸಿ ಸುಳ್ಳು ಆರೋಪಿಸಲಾಗಿದೆ ಎಂದು ಕಾರ್ಯಕರ್ತೆ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.