ಚೆನ್ನೈ (26-11-2020): ನಿವಾರ್ ಚಂಡಮಾರುತಕ್ಕೆ ತಮಿಳುನಾಡು ಮತ್ತು ಆಂಧ್ರಪ್ರದೇಶ ತತ್ತರಿಸಿದ್ದು ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
ಚಂಡಮಾರುತ ಪಾಂಡಿಚೇರಿ ಕರಾವಳಿ ಪ್ರದೇಶದಲ್ಲಿ 130 ಕಿಲೋ ಮೀಟರ್ ವೇಗದಲ್ಲಿ ಹಾದುಹೋಗಲಿದೆ. ಈ ಹಿನ್ನೆಲೆಯಲ್ಲಿ ಮಳೆ ತೀವ್ರಗೊಂಡಿದೆ.
ತಮಿಳುನಾಡಿನಲ್ಲಿ ದಾಖಲೆಯ 227 ಮಿ.ಮೀಟರ್ ಮಳೆಯಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿಯೂ ಭಾರೀ ಗಾಳಿ ಮಳೆಯಾಗಿದೆ ಎಂದು ವರದಿ ತಿಳಿಸಿದೆ. ಗಾಳಿ ಮಳೆಗೆ ನೂರಾರು ಮರಗಳು ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ ಮತ್ತು ಜನಜೀವನ ಅಸ್ತವ್ಯಸ್ಥವಾಗಿದೆ.
ಪಾಂಡಿಚೇರಿಯಲ್ಲಿ ಕಳೆದ 20ಗಂಟೆಗಳಲ್ಲಿ 20 ಸೆಂಟಿ ಮೀಟರ್ ನಷ್ಟು ದಾಖಲೆಯ ಮಳೆಯಾಗಿದೆ. ನಿವಾರ್ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲಿಯೂ ಬೀರಿದ್ದು, ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರು, ಕೋಲಾರ, ಚಿತ್ರದುರ್ಗ, ದಾವಣಗೆರೆಯಲ್ಲಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.