ನವದೆಹಲಿ(28.09.2020): ಕೇಂದ್ರ ರೂಪಿಸಿರುವ ನೂತನ ಕಾಯ್ದೆಯ ಯಾವ ಅಂಶ ರೈತರಿಗೆ ಹಾನಿ ಮಾಡುತ್ತದೆ ಎನ್ನುವುದನ್ನು ತೋರಿಸಲಿ ಎಂದು ನೂತನ ಕೃಷಿ ನೀತಿ ವಿರುದ್ಧದ ಪ್ರತಿಭಟನಾಕಾರರು ಹಾಗೂ ವಿಪಕ್ಷಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸವಾಲು ಹಾಕಿದ್ದಾರೆ.
ಕಾಯ್ದೆಯ ಯಾವ ಅಂಶ ನಿಮಗೆ ಸರಿ ಕಾಣಿಸುತ್ತಿಲ್ಲ, ರೈತರಿಗೆ ಯಾವ ರೀತಿಯಲ್ಲಿ ಅನ್ಯಾಯವಾಗುತ್ತಿದೆ, ಎಲ್ಲೆಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ದಯವಿಟ್ಟು ಹೇಳಿ ಎಂದು ಪತ್ರಿಕೆಯೊಂದಕ್ಕೆ ನಿರ್ಮಲಾ ಸೀತಾರಾಮನ್ ನೀಡಿರುವ ಸಂದರ್ಶನದಲ್ಲಿ ಅವರು ಪ್ರಶ್ನಿಸಿದ್ದಾರೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಪಕ್ಷಗಳು ಸೇರಿದಂತೆ, ಕೃಷಿ ಕ್ಷೇತ್ರ ಸಂಬಂಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಜೊತೆ ಮಾತ್ರವಲ್ಲ, ಸಂಸದರು ಮತ್ತು ರೈತರೊಂದಿಗೂ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಬಹಳ ಸುದೀರ್ಘ ಸಮಾಲೋಚನೆ ಬಳಿಕವಷ್ಟೇ ಮಸೂದೆಗಳನ್ನ ಮಂಡನೆ ಮಾಡಿದ್ದಾರೆ. ಆದರೆ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಇದೀಗ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಹೇಳಿದರು.
ಈ ಮಸೂದೆಯನ್ನು ತರಲು ಕೇಂದ್ರ ಸರ್ಕಾರವು ಯಾಕೆ ಇಷ್ಟೊಂದು ಆತುರ ತೋರುತ್ತಿದೆ ಎನ್ನುವ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್, ಈ ವಾದದಲ್ಲಿ ಹುರುಳಿಲ್ಲ ಎಂದಷ್ಟೇ ಹೇಳಿದರು.