ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿಕೆಯೊಂದರಲ್ಲಿ ಬಳಸಿರುವ ‘ಯುಪಿ-ಮಾದರಿ’ ಪದವು ವಿಪಕ್ಷ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್ ಅನ್ನು “ಮೋದಿ ಸರಕಾರದ ಝೀರೋ ಸಮ್ ಬಜೆಟ್” ಎಂದು ಟೀಕಿಸಿ ಮಾಡಿದ ಟ್ವೀಟ್ಗೆ ಉತ್ತರ ಪ್ರದೇಶ ಸಂಸದ ಹಾಗೂ ಕೇಂದ್ರ ವಿತ್ತ ರಾಜ್ಯ ಸಚಿವ ಪಂಕಜ್ ಚೌಧುರಿ ಉತ್ತರಿಸಿ “ಭವಿಷ್ಯವನ್ನು ಗಮನದಲ್ಲಿಟ್ಟು ಮಂಡನೆಯಾದ ಈ ಬಜೆಟ್, ಪ್ರಾಯಶಃ ರಾಹುಲ್ ಗಾಂಧಿ ಅವರಿಗೆ ಅರ್ಥವಾಗಿಲ್ಲ” ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ “ನನಗನಿಸುತ್ತದೆ ಅವರು (ಚೌಧುರಿ) ಆ ಯುಪಿ-ಮಾದರಿಯ ಉತ್ತರ ನೀಡಿದ್ದಾರೆ ಹಾಗೂ ಉತ್ತರ ಪ್ರದೇಶದಿಂದ ಓಡಿ ಹೋದ ಸಂಸದರಿಗೆ ಇದು ಸೂಕ್ತವಾಗಿದೆ” ಎಂದು ಹೇಳಿದ್ದರಲ್ಲದೆ ಬಿಜೆಪಿ ಸರಕಾರದ ಕುರಿತು ಹೇಳಿಕೆ ನೀಡುವ ಬದಲು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಅವರು ಮೊದಲು ಏನಾದರೂ ಮಾಡಬೇಕು ಎಂದಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನೀವು ಬಜೆಟಿನಲ್ಲಿ ಉತ್ತರ ಪ್ರದೇಶಕ್ಕೆ ಏನನ್ನೂ ನೀಡಿಲ್ಲ, ಆದರೆ ಉತ್ತರ ಪ್ರದೇಶದ ಜನರನ್ನು ಈ ರೀತಿ ಅವಮಾನಿಸುವ ಅಗತ್ಯವೇನಿತ್ತು? ತಿಳಿದುಕೊಳ್ಳಿ, ಉತ್ತರ ಪ್ರದೇಶದ ಜನರು “ಯುಪಿ-ಮಾದರಿ” ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಇತಿಹಾಸ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರತಿಕ್ರಿಯಿಸಿ, ವಿತ್ತ ಸಚಿವೆಯ ಹೇಳಿಕೆ ಉತ್ತರ ಪ್ರದೇಶದ 25 ಕೋಟಿ ಜನರಿಗೆ ದೊಡ್ಡ ಅವಮಾನ. ಅವರು ತಕ್ಷಣ ಉತ್ತರ ಪ್ರದೇಶದ ಜನರಿಂದ ಕ್ಷಮೆಯಾಚಿಸಬೇಕು, ಎಂದು ಆಗ್ರಹಿಸಿದ್ದಾರೆ.
