ಬೆಂಗಳೂರು(23-12-2020): ನಾಳೆಯಿಂದ(ಡಿ.24)ರ ರಾತ್ರಿಯಿಂದ ಜ.2ರವರೆಗೆ, ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಪ್ಯೂ ಜಾರಿಗೊಳಿಸಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶವನ್ನು ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ.
ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆ ವ್ಯಕ್ತಿಗಳ ಚಲನವಲನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಟ್ರಕ್ ಗಳು, ಸರಕು ವಾಹನ ಅಥವಾ ಯಾವುದೇ ಸರಕು ಸಾಗಣೆಗೆ ನಿರ್ಬಂಧವಿಲ್ಲ.
ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ ಶೇ.50ರಷ್ಟು ನೌಕರರೊಂದಿಗೆ ಕೆಲಸ ಮಾಡಲು ಕಾರ್ಖಾನೆಗಳಿಗೆ ಅನುಮತಿ. ನೌಕರರು ಐಟಿ ಕಾರ್ಡ್ ತೋರಿಸಿ, ಓಡಾಡಲು ಅವಕಾಶವಿದೆ.
24×7 ಕಾರ್ಖಾನೆಗಳ ಕೆಲಸಕ್ಕೆ ಯಾವುದೇ ನಿರ್ಬಂಧವಿಲ್ಲ ರಾತ್ರಿ ಬಸ್, ರೈಲು, ವಿಮಾನ, ಟ್ಯಾಕ್ಸಿ, ಆಟೋಗೆ ಕರ್ಪ್ಯೂ ವೇಳೆ ಸಂಚಾರಕ್ಕೆ ಅನುಮತಿ. ಕ್ರಿಸ್ ಮಸ್ ಹಾಗೂ ಹೊಸ ವರ್ಷವನ್ನು ಕೊರೋನಾ ಮಾರ್ಗಸೂಚಿ ಕ್ರಮಗಳೊಂದಿಗೆ ಆಚರಿಸಬೇಕು.
ಇನ್ನು ಸರ್ಕಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ ಮಾಜಿ ಸಚಿವ ಹೆಚ್.ಸಿ. ಮಹಾದೇವಪ್ಪ ಚಾಟಿ ಬೀಸಿದ್ದು, ರಾತ್ರಿ ಮಾತ್ರ ಎಚ್ಚರವಿರಲು ಕೊರೋನಾ ಏನು ಗೂಬೇನಾ? ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಬಿಟ್ಟುಕೊಂಡಿರುವುದು ಸರ್ಕಾರದ ನಿರ್ಲಕ್ಷ್ಯ ತೋರುತ್ತದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.