ಚಿಕ್ಕಮಗಳೂರು(29/10/2020): ಇನ್ನೂ ಹುಡುಗಿ ಹುಡುಕಿಲ್ಲ, ನಿಶ್ಚಿತಾರ್ಥವೂ ಆಗಿಲ್ಲ. ಆದರೆ, ಕಾಂಗ್ರೆಸ್ ಮಗು ನಾಮಕರಣದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಅವಧಿ ಮುಗಿಯಲು ಇನ್ನು ಮೂರೂವರೆ ವರ್ಷ ಇದೆ. ಆದಾರೆ, ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ಗಲಾಟೆ ಆರಂಭವಾಗಿದೆ. ಈಗಲೇ ಹೀಗೆ ಆಡಿದರೆ ಇನ್ನು ಅಧಿಕಾರ ಕಾಲ ಸನ್ನಿಹಿತವಾದರೆ ಹೇಗೆ ಆಡಬಹುದು’ ಎಂದು ಕಿಚಾಯಿಸಿದರು.
ಇದೇ ವೇಳೆ ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ‘ಬಿಜೆಪಿಯು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಯಲ್ಲಿ ಮತ ಯಾಚಿಸುತ್ತಿದೆ. ಆದರೆ, ಕಾಂಗ್ರೆಸ್, ಜೆಡಿಎಸ್ ಚುನಾವಣೆ ಸಂದರ್ಭದಲ್ಲಿ ಜಾತಿ ರಾಜಕಾರಣದಲ್ಲಿ ತೊಡಗಿವೆ’ ಎಂದು ಅವರು ಟೀಕಿಸಿದರು.