ನಾವು ಸಾವಿನ ಮನೆಯಲ್ಲಿದ್ದರೆ, ಸರ್ಕಾರ ಪ್ರಚಾರಕ್ಕೆ ಧುಮುಕಿದೆ : ರಾಜ್ಯ ಸರ್ಕಾರ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಜನ ಒದ್ದಾಡುತ್ತಿರುವ ವಾತಾವರಣ ನಿರ್ಮಾಣ ಆಗಿರುವ ಈ ಸನ್ನಿವೇಶದಲ್ಲಿ ಕೋಟ್ಯಾಂತರ ರೂಪಾಯಿ ಜನರ ದುಡ್ಡನ್ನು ಈ ರೀತಿ ಅನಗತ್ಯವಾಗಿ ಜಾಹಿರಾತಿಗೆ ಪೋಲು ಮಾಡುತ್ತಿರುವ ಇರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು ಮೆಟ್ರೋ 2 ಹಂತದ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಅರ್ಪಿಸುವ ನಗುಮೊಗದ ಒಂದು ಪುಟದ ಜಾಹೀರಾತು ಇಂದಿನ ಎಲ್ಲಾ ಪತ್ರಿಕೆಯ ಮೊದಲ ಮುಖಪುಟದಲ್ಲಿ ಪ್ರಕಟವಾಗಿದ್ದನ್ನು ಖಂಡಿಸಿದ ಕುಮಾರಸ್ವಾಮಿ ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್‌ ಹೊಡೆತಕ್ಕೆ ರಾಷ್ಟ್ರವೇ ತತ್ತರಿಸಿದೆ. ಜನ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸೂತಕದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ನಗುಮೊಗದ ಜಾಹೀರಾತೊಂದನ್ನು ನೀಡಿದೆ. ಈ ಮೂಲಕ ಜನರ ನೋವನ್ನು ಗೇಲಿ ಮಾಡಿದೆ. ಇದು ನಿಜಕ್ಕೂ ಆತ್ಮಸಾಕ್ಷಿಯ ನಡೆಯಲ್ಲ! ಮೆಟ್ರೋ 2ನೇ ಹಂತದ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಿದ್ದನ್ನೇ ನೆಪ ಮಾಡಿಕೊಂಡು ಸರ್ಕಾರ ಪ್ರಚಾರಕ್ಕೆ ಧುಮುಕಿದೆ. ರಾಜ್ಯಕ್ಕೆ ಕೇಂದ್ರ ನೀಡುವ ಅನುದಾನವೇನು ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಅದರಲ್ಲಿ ಪ್ರಚಾರ ಪಡೆಯುವ, ಜಾಹೀರಾತು ನೀಡುವ ತುರ್ತು ಏನಿದೆ ಎಂಬುದನ್ನು ಸರ್ಕಾರ ಪರಾಮರ್ಶೆ ಮಾಡಬೇಕಿತ್ತು. ಇದು ಸರ್ಕಾರದ ಹೊಣೆಗೇಡಿತನ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಮಾಜವೇ ಗಂಡಾಂತರದಲ್ಲಿ ಸಿಲುಕಿರುವಾಗ ಈ ಪ್ರಚಾರ ಪ್ರಿಯತೆ ಏಕೆ? ಜಾಹೀರಾತುಗಳಲ್ಲಿ ನೀವು ಬೀರುವ ನಗು ನೋವಿನಲ್ಲಿರುವವರನ್ನು ಅಣಕಿಸುತ್ತದೆ ಎಂಬ ಸೂಕ್ಷ್ಮತೆ ಇಲ್ಲವೇ? ಜಾಹೀರಾತುಗಳಿಗೆ ನೀಡುವ ಹಣವನ್ನು ವೈದ್ಯಕೀಯ ವ್ಯವಸ್ಥೆಗೆ ಬಳಸಿಕೊಂಡಿದ್ದಿದ್ದರೆ ಯಾರಾದರೂ ಬೇಡವೆನ್ನುತ್ತಿದ್ದರೆ? ಸರ್ಕಾರದ ಪ್ರಚಾರದ ಈ ಹುಚ್ಚು ನಾಚಿಕೆಗೇಡಿನದ್ದು.” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೋವಿಡ್‌ ಅನ್ನು ನಿಭಾಯಿಸಿದ ರೀತಿ ಮತ್ತು ಅದರಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದ ಬಗ್ಗೆ ಆರೋಪಗಳು ಬಂದವು. ಆದರೆ, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರ ನೈತಿಕತೆ ಪ್ರಶ್ನೆ ಎದುರಿಸಬಾರದು ಎಂಬ ಕಾರಣಕ್ಕೆ ನಾವೆಲ್ಲರೂ ಸುಮ್ಮನಿದ್ದೆವು. ಆದರೆ, ಕಣ್ಣ ಮುಂದಿನ ಇಂಥ ಬೇಜವಾಬ್ದಾರಿತನ, ಪ್ರಚಾರಪ್ರಿಯತೆಯನ್ನು ಸಹಿಸಲಾಗದು. ಈ ದುರಿತ ಕಾಲದಲ್ಲಿ ಸರ್ಕಾರ ಜನರ ಪ್ರಾಣ ರಕ್ಷಣೆಗಾಗಿ ಪಣತೊಡಬೇಕೆ ಹೊರತು, ಪ್ರಚಾರದಲ್ಲಿ ತೊಡಗಬಾರದಿತ್ತು. ಬಿಜೆಪಿಯ ಪ್ರಚಾರ ಪ್ರಿಯತೆ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಈ ಸನ್ನಿವೇಶದಲ್ಲಾದರೂ ಅದನ್ನು ನಿಲ್ಲಿಸಿ ಮಾದರಿ ನಡೆ ಅನುಸರಿಸಬೇಕಿತ್ತು. ಜನರ ವಿಶ್ವಾಸ ಗೆಲ್ಲಿ, ಇಲ್ಲದೇ ಹೋದರೆ, ನಿಮ್ಮ ಪ್ರಚಾರಗಳೆಲ್ಲವೂ ಋಣವಾಗುತ್ತದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು