ಮೈಸೂರು(11-10-2020): ಅನಾಥ ಶವವನ್ನು ಸಂಸ್ಕಾರ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಅಯೂಬ್ ಅಹ್ಮದ್ ಅವರನ್ನು ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಅಯೂಬ್ ಅಹ್ಮದ್ ಕಳೆದ 25 ವರ್ಷಗಳಿಂದ 10 ಸಾವಿರ ಅನಾಥ ಶವಗಳನ್ನು ಸಾಗಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಕೂಡ ಯಾರು ಶವಸಂಸ್ಕಾರಕ್ಕೆ ಮುಂದೆ ಬರದಿದ್ದಾಗ ಸ್ವತಃ ಮುಂದೆ ನಿಂತು 100ಕ್ಕೂ ಅಧಿಕ ಶವಗಳನ್ನು ಆಯೂಬ್ ಅಹ್ಮದ್ ಜಿಲ್ಲಾಡಳಿತದ ಜೊತೆ ಸೇರಿ ಸಂಸ್ಕಾರವನ್ನು ಮಾಡಿದ್ದಾರೆ.
ಮುಸ್ಲಿಮರು, ಹಿಂದೂ, ಕ್ರಿಶ್ಚಿಯನ್ನರು ಎನ್ನದೇ ಶವಸಂಸ್ಕಾರವನ್ನು ಮಾಡುತ್ತಿದ್ದ ಆಯೂಬ್ ಬೀದಿ ಬದಿಗಳಲ್ಲಿ ಮೃತಪಟ್ಟಂತಹ ಅನಾಥರ ಶವಗಳನ್ನು ಅಂತ್ಯ ಸಂಸ್ಕಾರ ಮಾಡುತ್ತಿದ್ದರು.
ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಅಯೂಬ್ ಅವರನ್ನು ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ 19 ವರ್ಷ ಇರುವಾಗಿನಿಂದಲೂ ನಾನು ಈ ಕೆಲಸವನ್ನು ಮಾಡುತ್ತಿದ್ದೆ ಆಗ ಜನರು ನನ್ನನ್ನು ಹೆಣ ಎತ್ತುವವನು ಎಂದು ಹೀಯಾಳಿಸುತ್ತಿದ್ದರು. ಈಗ ಅದೇ ಜನ ನನ್ನನ್ನು ಸನ್ಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.