ಮೈಸೂರಿನ ಅಕ್ಷರ ಕಣಜವನ್ನು ಸುಟ್ಟುಹಾಕಿದ  ಕ್ಷಣದಲ್ಲಿ ಮೂಡಿದ ಅಕ್ಷರಗಳಿವು

Share on facebook
Share on twitter
Share on linkedin
Share on whatsapp
Share on telegram
Share on email
Share on print

– ನಾ ದಿವಾಕರ, ಹಿರಿಯ ಲೇಖಕರು

ಸುಡುವುದನ್ನು ಕಲಿಸಿಕೊಟ್ಟಿರಿ. ಕೆಡವಲು ತರಬೇತಿಯನ್ನೇ ಕೊಟ್ಟಿರಿ. ಸುಟ್ಟು ಸಂಭ್ರಮಿಸಲು, ಅವಶೇಷಗಳ ಮೇಲೆ ನರ್ತಿಸಲು ಕಲಿಸಿಕೊಟ್ಟಿರಿ. ಕಾರ್ಯಾಗಾರಗಳು ನಡೆದವು. ವಿಚಾರ ಸಂಕಿರಣಗಳು ನಡೆದವು. ಯಾವುದೂ ಕಟ್ಟುವುದಕ್ಕಲ್ಲ. ಕಟ್ಟಿರುವುದನ್ನು ಕೆಡವಲು, ಕೆಡವಿದುದನ್ನು ಪುಡಿ ಮಾಡಲು, ಉಳಿದುದನ್ನು ದಹಿಸಿ ಭಸ್ಮದಲಿ ತಿಲಕ ಧರಿಸಲು ಕಾಲಾಳುಗಳನ್ನು ತಯಾರುಮಾಡಿಬಿಟ್ಟಿರಿ. ಸುಡುವುದೊಂದೇ ಧರ್ಮ, ಸುಟ್ಟು ಕರಕಲಾಗುವುದು ಮನುಜ ದೇಹವಾದರೇನು ಸ್ಮಾರಕ ಸ್ಥಾವರಗಳಾದರೇನು. ಮುಗಿಲೆತ್ತರಕೇರುವ ಅಗ್ನಿ ಜ್ವಾಲೆಯ ಒಡಲಿಂದ ಕೇಳಿಬರುವ ಚೀತ್ಕಾರಗಳನ್ನು ಸಂಭ್ರಮಿಸುವ ವಿಕೃತ ಮನಸುಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಿಬಿಟ್ಟಿರಿ. ಬೇಯುತ್ತಿರುವ ಜೀವಂತ ದೇಹಗಳ ಸುತ್ತ ನರ್ತಿಸುವುದನ್ನು ಕಲಿಸಿದಿರಿ. ಯಂತ್ರಗಳಿಲ್ಲದೆ ತಂತ್ರಗಳ ಮೂಲಕವೇ ಸ್ಥಾವರಗಳನ್ನು ನೆಲಸಮ ಮಾಡುವ ಬೃಹತ್ ಪಡೆಗಳನ್ನು ನಿರ್ಮಿಸಿಬಿಟ್ಟಿರಿ.

ಎಷ್ಟೊಂದು ಜೀವಗಳು, ಎಷ್ಟೊಂದು ಭಾವಗಳು ಗಂಗೆ ಯಮುನೆಯರಲ್ಲಿ, ತುಂಗೆ ಕಾವೇರಿಯಲ್ಲಿ ತೇಲಿ ತೇಲಿ ಕಡಲಡಿಯಲಿ ವಿಶ್ರಮಿಸಿಬಿಟ್ಟವು. ಎಷ್ಟೊಂದು ಜೀವಗಳು ಕಣ್ತೆರೆವ ಮುನ್ನವೇ ನೆಲದೊಡಲಲಿ ಹುದುಗಿಹೋದವು. ಈಗ ಸುಡುವುದೊಂದು ಕಲೆ, ಕೆಡವುವುದೊಂದು ಸಾಹಸ ಕ್ರೀಡೆ. ಹಿಂಸೆ ಒಂದು ಮನರಂಜನೆಯಾಗಿಹೋಯಿತು. ರಾಮ ರಹೀಮರ ಸ್ಮರಣೆಯೆಲ್ಲವೂ ರಣಕೇಕೆಗಳಲ್ಲಿ ಹುದುಗಿಹೋದವು. ಒಂದು ಗೋಪುರಕಾಗಿ, ಒಂದೆರಡು ಮಿನಾರುಗಳಿಗಾಗಿ ಸಾವಿರಾರು ನಾಡಿಗಳು ಬಡಿತ ನಿಲ್ಲಿಸಿದವು. ಸೊಲ್ಲೆತ್ತುವವರ ದನಿ ಅಡಗಿಸಲು ದಳಪತಿಗಳನ್ನು ಪಳಗಿಸಿಬಿಟ್ಟಿರಿ. ಅಲ್ಲೊಂದು ಕುಟುಂಬ, ಖೈರ್ಲಾಂಜಿಯ ಬೀದಿಗಳಲಿ ಹಿಂಸೆ, ಅತ್ಯಾಚಾರ, ಕೊಲೆ ಎಲ್ಲವನ್ನೂ ಅನುಭವಿಸಿಬಿಟ್ಟಿತು.

ಇಲ್ಲೊಂದು ಕಂಬಾಲಪಲ್ಲಿಯ ಗುಡಿಸಲಿನಲ್ಲಿ ದೇಹಗಳು ಬೆಂದು ಕರಕಲಾದವು. ಬೆಲ್ಚಿ, ಕರಂಚೇಡುವಿನಲ್ಲಿ ರುಂಡಗಳು ಚೆಲ್ಲಾಡಿಬಿಟ್ಟವು. ಇತಿಹಾಸದ ಗಾಯ ಅಳಿಸಲು ವರ್ತಮಾನ ಊನಗಳು ಸಂಭ್ರಮದ ನೆಲೆಗಳಾದವು. ತುಳಿತಕ್ಕೊಳಗಾದವರನ್ನೇ ಮತ್ತೆ ಮತ್ತೆ ತುಳಿಯಲು ಮನಸುಗಳು ಹಿಂಜರಿಯಲೇ ಇಲ್ಲ. ಸಾವಿರಾರು ಜೀವಗಳು, ಕಾಶ್ಮೀರದ ಕಣಿವೆಗಳಲ್ಲಿ, ಅಸ್ಸಾಮಿನ ತೋಟಗಳ ನಡುವೆ, ಸಬರಮತಿಯ ದಂಡೆಯಲಿ ಅನಾಥ ಶವಗಳಾದರೂ ಮನಸು ಕರಗಲೇ ಇಲ್ಲ. ಎಲ್ಲವೂ ಸಿಂಹಾಸನದ ಅಡಿಗಲ್ಲುಗಳಾಗಿಬಿಟ್ಟವು. ಉರುಳಿದ ಚಕ್ರಗಳಡಿ ಸಿಲುಕಿ ನರಳಿ ಕನಲಿ ನಿಶ್ಶೇಷವಾದ ಅಮಾಯಕ ಜೀವಗಳು ಒಣಗಿದ ಕಬ್ಬಿನ ಜಲ್ಲೆಗಳಂತೆ ದಹನವಾದವು. ಮನ ಮಿಡಿಯಲಿಲ್ಲ ಹೃದಯ ತುಡಿಯಲಿಲ್ಲ. ಯಾವುದೋ ಸಾರ್ಥಕ ಭಾವದಲಿ ಸಂಭ್ರಮಿಸಿ ವಿರಮಿಸಿಬಿಟ್ಟಿರಿ.

ಅಮಾಯಕ ಅಸಹಾಯಕ ದೇಹಗಳು ಅಧಿಕಾರದ ಹಾಸುಗಲ್ಲುಗಳಂತೆ ನವಿರಾಗಿಬಿಟ್ಟವು. ಒಳ ದನಿಗಳು ಹುದುಗಿಹೋದವು. ಕಂಗೆಟ್ಟ ಮನಸುಗಳು ಮುದುಡಿಹೋದವು. ಒಂದಾದ ಜೀವಗಳ ತುಂಡರಿಸಿಬಿಟ್ಟಿರಿ. ಅಪ್ಪಿದ ದೇಹಗಳ ಬೇರ್ಪಡಿಸಿದಿರಿ. ಶ್ರೇಷ್ಠತೆಗಾಗಿಯೋ ಅಹಮಿಕೆಗಾಗಿಯೋ ಒಂದಾದುವೆಲ್ಲಾ ಎರಡಾಗಿಬಿಟ್ಟವು. ಒಮ್ಮೆ ಗೋವಿಗಾಗಿ ಮತ್ತೊಮ್ಮೆ ಮೇವಿಗಾಗಿ ಯಜ್ಞಕುಂಡಗಳು ಸಿದ್ಧವಾಗಿಬಿಟ್ಟವು. ಚರ್ಮ ಸುಲಿಯುವ ಕೈಗಳಿಗೆ ಕೋಳ ತೊಡಿಸದೆ ಊರುಗೋಲುಗಳ ಕೊಟ್ಟಿರಿ. ಮತಧರ್ಮದ ಅಮಲಿನಲಿ ಹೆಣ್ಣು ಮನುಜಳೆನಿಸಲಿಲ್ಲ. ತಾಯಂದಿರೋ ಅಕ್ಕ ತಂಗಿಯರೋ ಅನ್ಯರೆಂದೆಣಿಸಿದೆಡೆ ಸಂಭ್ರಮಿಸಿಬಿಟ್ಟಿರಿ ಅತ್ಯಾಚಾರದ ಬಯಲಿನಲಿ. ಕ್ರೌರ್ಯಕ್ಕೊಂದು ವ್ಯಾಖ್ಯಾನ, ಹಿಂಸೆಗೊಂದು ಮೀಮಾಂಸೆ, ಶೋಷಣೆಗೊಂದು ತತ್ವ. ಶತಮಾನಗಳ ಜನಸಂಸ್ಕೃತಿಗಳಿಗೆ ಕ್ಷಣಮಾತ್ರದಲಿ ಸಮಾಧಿಗಳ ಕಟ್ಟಿಬಿಟ್ಟಿರಿ.

ಸುಡುವುದೊಂದೇ ಧ್ಯೇಯ, ಕೆಡವುವುದೊಂದೇ ದಾರಿ ಎಂದಾದರೆ ಶಿರಡಿಯ ಬಾಬ ಆದರೇನು ಮೈಸೂರಿನ ಸಾಬ ಆದರೇನು. ಸಾವಿರಾರು ಪುಸ್ತಕಗಳೂ ಸುಟ್ಟುಹೋದವು. ಸುಟ್ಟವರಾರು ? ನಾನಲ್ಲ, ನೀನಲ್ಲ, ಅವನಲ್ಲ, ಅವನಿರಬೇಕು, ಅವರು ಹಾಗೆಯೇ, ನಾವು ಅಂಥವರಲ್ಲ, ಅದು ನಮ್ಮ ಸಂಸ್ಕೃತಿಯಲ್ಲ, ಅವರೇ ಸುಟ್ಟಿರಬೇಕು ಎಷ್ಟೊಂದು ಮಾತುಗಳಲ್ಲವೇ ? ಕಿವಿಗೊಟ್ಟು ಕೇಳಿ ಮಹನೀಯರೇ ತೆರೆಮರೆಯಲಿ ಹೀಗೂ ಕೇಳಿಸಬಹುದು : ಅವರದಲ್ಲವೇ ಸುಡಲಿ ಬಿಡಿ, ಅವರಲ್ಲೇಕೆ ಆ ಗ್ರಂಥಗಳು, ನಮ್ಮದೆಲ್ಲವೂ ಅವರಲ್ಲೇಕೆ, ತಕ್ಕ ಶಾಸ್ತಿಯಾಗಲಿ ಬಿಡಿ ಹೀಗೆ. ವಿಕೃತಿಗಳ ಪರ್ವತಗಳನ್ನೇ ನಿರ್ಮಿಸಿಬಿಟ್ಟಿದ್ದೀರಿ. ಕೆಲವೇ ದಶಕಗಳಲ್ಲಿ.

ನಿಮ್ಮಲ್ಲಿ ಯಾರು ಅಪರಾಧಿಗಳು ? ವಿಶ್ರಮಿಸಿರುವವರೋ, ಇಹಲೋಕ ತ್ಯಜಿಸಿರುವವರೋ, ಅಧಿಕಾರದ ಲಾಠಿ ಹಿಡಿದವರೋ, ತೆರೆಮರೆಯ ಸೂತ್ರಧಾರಿಗಳೋ ? ಯಾರನ್ನು ದೂಷಿಸುವುದು. “ ಅಪರಾಧಿ ನಾನಲ್ಲ ಈ ಅಪರಾಧ ಎನಗಿಲ್ಲ,,,,,” ದಾಸರ ಪದ. ಹೌದಲ್ಲವೇ ಮಹನೀಯರೇ ? ನೀವು ಬಿತ್ತಿದ ಬೀಜಗಳಲ್ಲೇ ದೋಷವಿದೆ. ವೃಕ್ಷ ವಿಷಪೂರಿತವಾಗದಿರುವುದೇ ? ಎಲೆ ಎಲೆಯೂ ನಂಜು. ಕುಡಿ ಕುಡಿಯೂ ವಿಷ. ದ್ವೇಷವನೇ ಬಿತ್ತಿರುವಿರಿ ಪ್ರೀತಿ ಮೊಳೆಯುವುದಾದರೂ ಹೇಗೆ ? ನಿಮ್ಮ ಸ್ಥಾವರಗಳು ಸುರಕ್ಷಿತ. ನಿಮಗೆ ಜಂಗಮರ ಹಂಗೇಕೆ ? ನೋಡಿ ಜಂಗಮರಿಲ್ಲಿದ್ದಾರೆ. ಮೈಸೂರಿನ ಸೈಯ್ಯದ್ ಇಸಾಕ್ ಅಂಥವರಲ್ಲಿ. ಅಕ್ಷರಜ್ಞಾನವಿಲ್ಲದೆಯೂ ಅಕ್ಷರ ಕಣಜವನ್ನು ಪೋಷಿಸುವ ಸಂತರಿದ್ದಾರೆ. ಇಂಥವರು ಲಕ್ಷ ಸಂಖ್ಯೆಯಲ್ಲಿದ್ದಾರೆ. ಇವರ ಕಣಜಕ್ಕೆ ಬೆಂಕಿ ಬಿದ್ದಿದೆ.

ಮತ್ತದೇ ಕೂಗು. ನಾವಲ್ಲ, ನಾವಲ್ಲ. ಸುಡಲು ನೆರವಾಗುವುದು ಕೈಗಳು. ಸುಡುವವರ ಕೈಗಳು ಸಿಗದೆಯೇ ಹೋಗಬಹುದು. ಆದರೆ ಸುಡಲು ಬಯಸುವ ಮನಸುಗಳು ಸುತ್ತ ಆವರಿಸಿವೆ. ಅಂದು ಕಂಬಾಲಪಲ್ಲಿ ಇಂದು ಸೈಯ್ಯದ್ ಇಸಾಕ್. ಅಂದು ಭೌತಿಕ ದೇಹದ ದಹನ. ಇಂದು ಬೌದ್ಧಿಕ ಕಣಜದ ದಹನ. ದಹಿಸುವವರಿಗೆ ಪಟಪಟನೆ ಸದ್ದುಮಾಡುವ ಸುಟ್ಟ ಕಾಗದಗಳೂ ಒಂದೇ ಚಿಟಚಿಟನೆ ಸಿಡಿವ ಮನುಜನ ಬುರುಡೆಯೂ ಒಂದೇ. ಎಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ? ಇನ್ನೂ ನಾಗರಿಕತೆಯ ಬಗ್ಗೆ ಮಾತನಾಡೋಣವೇ ? ತಟ್ಟಿಕೊಳ್ಳಲು ಬೆನ್ನು ಇದೆ ಆದರೆ ಬೆನ್ನ ಮೇಲಿರುವ ಕಳಂಕಗಳು ಬೆಟ್ಟದಷ್ಟಿವೆ. ವಿರಮಿಸಿರುವವರು ವಿರಮಿಸಲಿ. ಅವರು ನಿವೃತ್ತರಾಗಿ ವಿರಮಿಸುತ್ತಿದ್ದಾರೆ.

ಉಸಿರಾಡುತಿರುವವರಿಗೆ ಸುಟ್ಟ ವಾಸನೆ ಮೂಗಿಗೆ ಬಡಿಯಬೇಕಲ್ಲವೇ ? ಎಂತಹ ಸಂಸ್ಕೃತಿಯನ್ನು ಸಲಹಿ, ಪೋಷಿಸಿದ್ದೇವೆ ? ಹನ್ನೊಂದು ಸಾವಿರ ಪುಸ್ತಕಗಳ ಕಣಜಕ್ಕೆ ಬೆಂಕಿ ಇಡುವಷ್ಟು ಕ್ರೌರ್ಯ ನಮ್ಮ ನಡುವೆ ಇದೆ. ಅಚ್ಚರಿಯೇನಿಲ್ಲ. ದೇಹಗಳನ್ನೇ ಸುಟ್ಟು ಸಂಭ್ರಮಿಸಿದವರಲ್ಲವೇ ? ಎಂದಿಗೆ ಕೊನೆ ಈ ವಿಕೃತ ಸಂಸ್ಕೃತಿಯ ಅಟ್ಟಹಾಸ. ಅಪರಾಧ, ಅಪರಾಧಿ, ವಿಚಾರಣೆ, ಶಿಕ್ಷೆ ಇವೆಲ್ಲವುಗಳಿಂದಾಚೆಗೆ ಒಂದು ಯೋಚನೆ ಮಿಂಚಿನಂತೆ ಹಾದು ಹೋಗುತ್ತದೆ–

“ಸುಟ್ಟ ಹಾಳೆಗಳಿಗೆ ಮರುಜೀವ ಸಾಧ್ಯವೇ?”. ಸಾರ್ವಜನಿಕ ಬದುಕಿನ ಪುಟಪುಟದಲ್ಲೂ ದ್ವೇಷ, ಸೇಡು, ಅಸೂಯೆಯ ಕಿಡಿಗಳು ಹೊತ್ತಿ ಉರಿಯುತ್ತಿರುವಂತೆ ಭಾಸವಾಗುತ್ತಿದೆ. ಸೈಯ್ಯದ್ ಇಸಾಕ್ ಏಕಾಂಗಿಯಲ್ಲ ಎಂದು ಹೇಳುವ ಮುನ್ನ ಅಂತರಾತ್ಮ ಎಚ್ಚರಿಸುತ್ತದೆ. ವಿಕೃತ ಸಂತತಿ ಇನ್ನೂ ಜೀವಂತವಾಗಿದೆ. ಇದು ಕೊನೆಯಾಗುವುದಾದರೂ ಹೇಗೆ ? ನಾವೂ ಸುಡಬೇಕು ನಮ್ಮೊಳಗಿನ ದ್ವೇಷ, ಅಸೂಯೆ ಮತ್ತು ಶ್ರೇಷ್ಠತೆಯ ಅಹಮಿಕೆಗಳನು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು