ಚಿತ್ರದುರ್ಗ(17/10/2020): ನುಡಿದಂತೆ ನಡೆಯುವಲ್ಲಿ ಮೋದಿ ಸಂಪೂರ್ಣ ಸೋತಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಮಾತುಗಳಿಂದಲೇ ಜನರ ಹೊಟ್ಟೆ ತುಂಬಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಅವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಎಚ್. ಆಂಜನೇಯ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶ ಮತ್ತು ಪ್ರಜೆಗಳಿಗೆ ಅಚ್ಛೆ ದಿನ್ ಬರಲಿದೆ ಎಂಬುದಾಗಿ ಪ್ರಧಾನಿ ಮೋದಿ ಅವರು ಹೇಳಿದ ಮಾತು ಸುಳ್ಳಾಗಿದೆ. ಅದು ಕೇವಲ ಕನಸಾಗಿಯೇ ಉಳಿಯಲಿದೆ’. ದೇಶ ಆರ್ಥಿಕ ಸಂಕಷ್ಟದಲ್ಲಿ ಇರುವುದಕ್ಕೆ ಕೋವಿಡ್ ಒಂದೇ ಕಾರಣವಲ್ಲ. ಇದರಲ್ಲಿ ಬಹುಪಾಲು ಪ್ರಧಾನಿ ಅವರು ತೆಗೆದುಕೊಂಡ ಕೆಲ ತಪ್ಪು ನಿರ್ಧಾರಗಳೂ ಕಾರಣ. ಇದಕ್ಕೆ ಬಿಜೆಪಿಯೇ ನೇರ ಹೊಣೆ. ಬಿಜೆಪಿಯಿಂದ ದೇಶ ದಿವಾಳಿಯಾಗಿದೆ. ಮೋದಿ ದೇಶದ ಅಭಿವೃದ್ಧಿ ಸಾಧಿಸುವ ಬದಲು ಕುಂಠಿತಗೊಳಿಸಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.