ಹೊಸದೆಹಲಿ(29/10/2020): ವಿಶ್ವವೇ ಕೋವಿಡ್ 19ಗೆ ತುತ್ತಾಗಿದ್ದ ಸಂದರ್ಭದಲ್ಲಿ ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಮತ್ತು ಇತರ ನೆರವು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜುಲೈ ತಿಂಗಳಿನಲ್ಲಿ ವಿಶ್ವಸಂಸ್ಥೆಯಲ್ಲಿ ತಿಳಿಸಿದ್ದರು. ಇದು ಸುಳ್ಳು ಮಾಹಿತಿ ಆಗಿತ್ತೇ? ಎಂಬ ಸಂಶಯವನ್ನು ಪ್ರಮುಖ ಆಂಗ್ಲ ಪತ್ರಿಕೆಯೊಂದು ವರದಿಯಲ್ಲಿ ಪ್ರಕಟಿಸಿದೆ.
ಇದಕ್ಕೆ ಕಾರಣ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಕೇಂದ್ರ ಸರ್ಕಾರ ನೀಡಿದ ಉತ್ತರ. ವಿಶ್ವಸಂಸ್ಥೆ ವೇದಿಕೆಯಲ್ಲಿ ಪ್ರಧಾನಿ ಮೋದಿ ನೀಡಿದ ಉತ್ತರಕ್ಕೂ ಮಾಹಿತಿ ಹಕ್ಕು ಮೂಲಕ ಕೇಂದ್ರ ಸರಕಾರದಿಂದ ದೊರೆತ ಉತ್ತರಕ್ಕೂ ಅಜಗಜಾಂತರವಿದೆ. ಕೇಂದ್ರವು ಆಗಸ್ಟ್ ಮೊದಲ ವಾರದ ಹೊತ್ತಿಗೆ 81 ದೇಶಗಳಿಗೆ, 97.73 ಕೋಟಿಯಷ್ಟು ನೆರವು ನೀಡಿದೆ ಎಂದು ಮಾಹಿತಿ ಹಕ್ಕು ಮೂಲಕ ಕೇಂದ್ರ ಸರಕಾರ ತಿಳಿಸಿದೆ. ಮೋದಿ ಅವರು ಹೇಳಿದ್ದೇ ಸತ್ಯವಾಗಿದ್ದರೆ ಉಳಿದ ರಾಷ್ಟ್ರಗಳು ಯಾವುದು? ಯಾಕೆ ಅವುಗಳ ಹೆಸರನ್ನು ಕೇಂದ್ರ ಸರಕಾರ ಬಹಿರಂಗಪಡಿಸಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಪ್ರಶ್ನಿಸಿದೆ.
ಇನ್ನೊಂದು ಕಡೆ, ಆಗಸ್ಟ್ 5ರ ವರೆಗಿನ ಮಾಹಿತಿ ಪ್ರಕಾರ ಚೀನಾ ಭಾರತದಿಂದ 1.87 ಮೊತ್ತದ ನೆರವು ಪಡೆದುಕೊಂಡಿದೆ ಎಂದು ವಿದೇಶಾಂಗ ಇಲಾಖೆ ಆರ್ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಎಂಬುವವರಿಗೆ ನೀಡಿದ ಮಾಹಿತಿಯಲ್ಲಿ ಹೇಳಿದೆ. ಆದರೆ, ಈ ಹಿಂದೆ ಲೋಕಸಭೆಗೆ ಮಾಹಿತಿ ನೀಡಿದ್ದ ಸಚಿವ ಮುರುಳಿಧರನ್ ಅವರು, ಚೀನಾಕ್ಕೆ 2.11 ಕೋಟಿ ಮೊತ್ತದ ವೈದ್ಯಕೀಯ ನೆರವು ನೀಡಿರುವುದಾಗಿ ಹೇಳಿದ್ದರು.