ಬಳ್ಳಾರಿ(16-12-2020): ಪತ್ನಿಯರು ತನ್ನ ಜೊತೆಗೆ ಬದುಕುತ್ತಿಲ್ಲವೆಂದು ಬೇಸತ್ತು ಪತಿರಾಯ ತೆಂಗಿನ ಮರವೇರಿ ಕುಳಿತ ವಿಲಕ್ಷಣ ಘಟನೆಯು ಬಳ್ಳಾರಿ ಜಿಲ್ಲೆಯ ದಾಸೋಬನಹಳ್ಳಿಯಲ್ಲಿ ನಡೆದಿದೆ. ಕೊನೆಗೆ ಮೊದಲ ಪತ್ನಿ ಬಂದು ಮುಖ ದರ್ಶನ ಮಾಡಿದ ಬಳಿಕ ನಲ್ವತ್ತು ವರ್ಷ ವಯಸ್ಸಿನ ದೊಡ್ಡಪ್ಪ ಎನ್ನುವ ಈ ವ್ಯಕ್ತಿ ಮರದಿಂದ ಕೆಳಗಿಳಿದಿದ್ದಾರೆ.
ಮೊದಲ ಬಾರಿ ತನ್ನ ಸೋದರ ಸೊಸೆಯೊಂದಿಗೆ ಮದುವೆಯಾಗಿದ್ದರೂ ಮಕ್ಕಳಾಗಿರಲಿಲ್ಲ. ಇದೇ ಕಾರಣದಿಂದ ಆಕೆ ಪತಿಯನ್ನು ಬಿಟ್ಟು ತವರಿಗೆ ತೆರಳಿದ್ದಳು. ಬಳಿಕ ಇನ್ನೊಂದು ಮದುವೆಯಾಗಿ, ಮೂರು ಮಕ್ಕಳನ್ನು ಪಡೆದರು. ಆದರೆ ಐದು ವರ್ಷಗಳ ಹಿಂದೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ ಕಾರಣ ಎರಡನೆಯ ಪತ್ನಿಯೂ ದೂರವಾದಳು.
ಪತ್ನಿಯರ ಅಗಲಿಕೆಯಿಂದ ಬೇಸತ್ತು ಕೊನೆಗೆ ತೆಂಗಿನ ಮರದ ಮೊರೆ ಹೋಗಿದ್ದಾರೆ. ಗ್ರಾಮಸ್ಥರು, ಪೋಲೀಸರು ಮರ ಇಳಿಯುವಂತೆ ವಿನಂತಿಸಿದರೂ ಕೇಳದಿದ್ದಾಗ, ಮೊದಲ ಪತ್ನಿಯನ್ನು ಕರೆಸಲಾಯಿತು. ಮೊದಲ ಪತ್ನಿಯ ಮುಖ ನೋಡಿದವರೇ ಅಗ್ನಿಶಾಮಕ ದಳದವರ ಸಹಾಯದಿಂದ ಮರದಿಂದ ಕೆಳಗಿಳಿದರು.