ಆಂಧ್ರಪ್ರದೇಶ (05-10-2020): ಆಂಧ್ರಪ್ರದೇಶದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಂಗಿ ಮೇಲೆ ಪರಿಚಯಸ್ಥನೋರ್ವ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದಾಗ ಆತನ ಮೇಲೆ ಕುಡಗೋಲಿನಿಂದ ಹಲ್ಲೆ ಮಾಡಿ ತಂಗಿಯನ್ನು ರಕ್ಷಿಸಿದ್ದಾಳೆ.
17 ಮತ್ತು 15 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ತಮ್ಮ ಜಾನುವಾರುಗಳನ್ನು ಚಿತ್ತೂರು ಜಿಲ್ಲೆಯ ರಾಮಸಮುದ್ರಂ ಮಂಡಲದ ತಿರುಮಲರೆಡ್ಡಿಪಲ್ಲಿ ಎಂಬ ಗ್ರಾಮದಲ್ಲಿ ತೆರೆದ ಮೈದಾನದಲ್ಲಿ ಮೇಯಿಸುತ್ತಿದ್ದರು.
ರಾಮಸಮುದ್ರಂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವಿ ಕುಮಾರ್ ಪ್ರಕಾರ, ಆರೋಪಿ ಶಂಕರಪ್ಪ ಬಾಲಕಿಯರ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ. ಬಾಲಕಿಯರ ಕುಟುಂಬಕ್ಕೆ ಸೇರಿದ ಕುರಿಗಳ ಹಿಂಡು ಶಂಕರಪ್ಪನ ಭೂಮಿಗೆ ಅಲೆದಾಡಿದಾಗಲೆಲ್ಲಾ ಎರಡು ಕುಟುಂಬಗಳು ಆಗಾಗ್ಗೆ ವಾಗ್ವಾದಕ್ಕೆ ಇಳಿಯುತ್ತಿದ್ದವು.
ಈ ಘಟನೆಯ ಹಿಂದಿನ ದಿನವೂ, ಶಂಕರಪ್ಪ ಅವರ ಪತ್ನಿ ಮತ್ತು ಬಾಲಕಿಯರ ತಂದೆ ಈ ವಿಷಯದ ಬಗ್ಗೆ ಜಗಳವಾಡಿದ್ದರು ಎಂದು ಎಸ್ಐ ರವಿ ಕುಮಾರ್ ಹೇಳಿದರು.
ಇಬ್ಬರು ಯುವತಿಯರು ತಮ್ಮ ಕುರಿಗಳನ್ನು ತೆರೆದ ಮೈದಾನದಲ್ಲಿ ಮೇಯಿಸಲು ಕರೆದೊಯ್ದಿದ್ದರು. ಶಂಕರಪ್ಪ 15 ವರ್ಷದ ಬಾಲಕಿಯನ್ನು ಒಬ್ಬಂಟಿಯಾಗಿರುವುದನ್ನು ನೋಡಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದನು ಮತ್ತು ಅವಳ ಕೈ ಹಿಡಿದುಕೊಂಡನು. ತಕ್ಷಣ ಎಚ್ಚೆತ್ತ ಅವಳ ಅಕ್ಕ ಕುಡಗೋಲು ಎತ್ತಿಕೊಂಡು ಆ ವ್ಯಕ್ತಿಯ ಭುಜದ ಮೇಲೆ ಹೊಡೆದು ಸಹೋದರಿಯನ್ನು ರಕ್ಷಿಸಿದ್ದಾಳೆ.
ಈ ಕುರಿತು ಬಾಲಕಿಯರು ರಾಮಸಮುದ್ರಂ ಪೊಲೀಸರಿಗೆ ದೂರು ನೀಡಿದ್ದು, ಶಂಕರಪ್ಪ ವಿರುದ್ಧ 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು), 506ರಡಿ ಪ್ರಕರಣ ದಾಖಲಿಸಿದ್ದಾರೆ.