ಬೆಂಗಳೂರು(10-02-2021): ನ್ಯಾ. ರಾಜೇಂದ್ರ ಸಾಚಾರ ಸಮಿತಿ ವರದಿ ಜಾರಿಗೆ ಮೀನಾಮೇಷ ಏಕೆ ಎಂದು ಕರ್ನಾಟಕ ಸೌಹಾರ್ದ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹಿಬೂಬ ಐ ಮುಲ್ಲಾ ಬಳಬಟ್ಟಿ ಪ್ರಶ್ನಿಸಿದ್ದಾರೆ.
ಮಾದ್ಯಮದ ಜೊತೆ ಮಾತನಾಡಿದ ಮಹಿಬೂಬ ಐ ಮುಲ್ಲಾ ಬಳಬಟ್ಟಿ, ಮುಸ್ಲಿಮರು ಈ ದೇಶದ ಮೂಲ ನಿವಾಸಿಗಳು. ದೇಶದ ಒಟ್ಟು ಜನಸಂಖ್ಯೆಯಲ್ಲಿ 14% ದಷ್ಟು ಮುಸ್ಲಿಮರು ದೇಶದ ವಿವಿಧ ಭಾಗಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ದೇಶದ ಎರಡನೇ ಅತಿದೊಡ್ಡ ಸಮುದಾಯ ಎಂದು ಕರೆಯಲ್ಪಡುವ ಮುಸ್ಲಿಂ ಸಮುದಾಯ ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿಯನ್ನೇ ಸಾಧಿಸಿಲ್ಲ. ಮುಸ್ಲಿಮ್ ಸಮುದಾಯ ನ್ಯಾ.ರಾಜೇಂದ್ರ ಸಾಚಾರ ಸಮಿತಿಯನ್ನು ರಚನೆ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಲಿಲ್ಲ. ಆದರೆ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಮೇಲಿನ ಕಾಳಜಿ ತೋರ್ಪಡಿಕೆಗೆ ಕಾಂಗ್ರೆಸ್ ಸರಕಾರ ಸಾಚಾರ ಸಮಿತಿ ರಚನೆ ಮಾಡಿಸಿ ವರದಿ ಸಿದ್ಧತೆ ಮಾಡಿಸಿತ್ತು. ವರದಿ ಸಿದ್ಧತೆಗೆ ಕೋಟ್ಯಾಂತರ ರೂ.ವೆಚ್ಚವನ್ನು ಕೂಡ ಮಾಡಿತ್ತು. ಆದರೆ ವರದಿಯನ್ನು ಜಾರಿ ಏಕೆ ಮಾಡಲಿಲ್ಲಾ ಎಂದು ಪ್ರಶ್ನಿಸಿದ್ದಾರೆ.
ಮಸ್ಲಿಮರಿಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳು ಸಿಕ್ಕಿಲ್ಲ, ಅವರಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಅರಿವು ಕೂಡ ಇಲ್ಲ. ಇದಕ್ಕೆ ಪ್ರಮುಖ ಕಾರಣ ಸ್ವಾತಂತ್ರ್ಯದ ಬಳಿಕ ನಮ್ಮನ್ನು ಆಳ್ವಿಕೆ ನಡೆಸಿದ ಭಾರತದ ರಾಜಕೀಯ ವ್ಯವಸ್ಥೆ ಎಂದು ಮಹಿಬೂಬ ಐ ಮುಲ್ಲಾ ಬಳಬಟ್ಟಿ ದೂರಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಅಭಿವೃದ್ಧಿ ಆಗಬೇಕಾದರೆ ಎಲ್ಲ ವರ್ಗಗಳ ಜೊತೆ ಮುಸ್ಲಿಮರಿಗೂ ಉದ್ಯೋಗ, ಶಿಕ್ಷಣ, ಸಾಮಾಜಿಕ ಭದ್ರತೆ, ರಾಜಕೀಯ ಅಧಿಕಾರದಲ್ಲಿ ಮೀಸಲಾತಿ, ಆರ್ಥಿಕ ಭದ್ರತೆಗಳಲ್ಲಿ ಸಮಾನತೆ ಇದ್ದರೆ ಮಾತ್ರ ಮುಸ್ಲಿಮರು ಏಳಿಗೆ ಆಗಲು ಸಾಧ್ಯ. ದೇಶದಲ್ಲಿ ಸಾಚಾರ ಸಮಿತಿಯನ್ನು ರಚಿಸಿ ಭಾರತದಲ್ಲಿನ ಮುಸ್ಲಿಮರ ಪರಿಸ್ಥಿತಿ ದಲಿತರಗಿಂತಲೂ ತುಂಬಾ ಹೀನಾಯವಾಗಿದೆ ಎಂದು ಆಳುವ ಸರಕಾರಗಳಿಗೆ ವರದಿ ಸಲ್ಲಿಸಿದ್ದರು ಕೂಡಾ ಮುಸ್ಲಿಮರ ಅಭಿವೃದ್ಧಿ ಕಡೆ ಗಮನ ಹರಿಸದೆ ಇರುವುದು ಮುಸ್ಲಿಮರಿಗೆ ಮಾಡಿದ ಮಹಾದ್ರೋಹ ಎಂದು ಹೇಳಿದ್ದಾರೆ.
ಸಾಚಾರ ಸಮಿತಿಯ ವರದಿಯು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಲ್ಲ. ಈ ದೇಶದ ಎಲ್ಲ ಹಿಂದುಳಿದ ಸಮುದಾಯಗಳಿಗೂ ಸಮಾನವಾದ ಅವಕಾಶ ಒದಗಿಸಲು ಪ್ರಜಾ ಪ್ರಭುತ್ವದ ಆಶಯದಂತೆ ರಚಿಸಲ್ಪಟ್ಟ ಸಮಿತಿಯಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಮರಿಗೆ ಸರಕಾರಿ ಉದ್ಯೋಗ, ಮತ್ತು ಇತರೆ ಸರಕಾರಿ ಮಂಡಳಿಗಳಲ್ಲಿ ನ್ಯಾಯ ಬದ್ಧ ಅವಕಾಶಗಳು ಸಿಕ್ಕಿಲ್ಲಾ. ಮುಸ್ಲಿಮ್ ಸಮುದಾಯವು ಈ ದೇಶದ ಅವಿಭಾಜ್ಯ ಅಂಗವಾಗಿದೆ. ಆದರೆ, ದೇಶದಲ್ಲಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಆಳುವ ಸರಕಾರಗಳು ಜ್ಯಾತ್ಯಾತೀತ ಮುಖವಾಡ ಹಾಕಿಕೊಂಡು ಮುಸ್ಲಿಮರಿಗೆ ಮಲತಾಯಿಧೋರಣೆ ತೋರುತ್ತಿವೆ ಎಂದು ಆರೋಪಿಸಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರು ಜಾಗೃತರಾಗಬೇಕು, ಸಮುದಾಯದಲ್ಲಿರುವ ಎಲ್ಲಾ ವರ್ಗ ಹಾಗೂ ವಿವಿಧ ಸಂಘಟನೆಗಳಲ್ಲಿ ಕಾರ್ಯ ಮಾಡುವ ಮುಸ್ಲಿಮ್ ನಾಯಕರುಗಳು ಸಮುದಾಯವನ್ನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು. ಸಾಚಾರ ಸಮಿತಿಯು ಜಾರಿ ಆಗುವುದರಿಂದ ಸಮುದಾಯಕ್ಕೆ ಏನು ಪ್ರಯೋಜನ ಅನ್ನೋದನ್ನು ಪ್ರತಿಯೊಂದೂ ಮುಸ್ಲಿಮರ ಮನೆ ಬಾಗಿಲಿಗೆ ತಲಿಪಿಸುವ ಕೆಲಸ ಮಾಡುವುದು ಅನಿವಾರ್ಯ ಹಾಗೂ ನಮ್ಮ ಕರ್ತವ್ಯ ಆಗಿದೆ ಎಂದು ಹೇಳಿದ್ದಾರೆ.