ಚಾಮರಾಜನಗರ ಸೋಂಕಿತರ ಸಾವು ಘಟನೆ: ಸರ್ಕಾರ ಮೃತರ ಕುಟುಂಬಕ್ಕೆ ತಲಾ ರೂ.25 ಲಕ್ಷ ಪರಿಹಾರ ನೀಡಬೇಕೆಂದು ಸಿದ್ದರಾಮಯ್ಯ ಒತ್ತಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಾಮರಾಜನಗರ: ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಆಕ್ಸಿಜನ್, ಬೆಡ್‌ಗಳು, ವೈದ್ಯರು ಸೇರಿದಂತೆ ವಿವಿಧ ವೈದ್ಯಕೀಯ ಸವಲತ್ತುಗಳನ್ನು ಪೂರೈಕೆ ಮಾಡಬೇಕಾದುದ್ದು ರಾಜ್ಯ ಸರ್ಕಾರದ ಜವಾಬ್ದಾರಿ, ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳ ಸಾವಿಗೆ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಿನ್ನೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಸೋಂಕಿತರ ಮಾಹಿತಿ ಪಡೆಯಲು ಇಂದು ಚಾಮರಾಜನಗರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಆಸ್ಪತ್ರೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಕಳೆದು ಒಂದು ದಿನದಲ್ಲಿ ಚಾಮರಾಜನಗರ ಜಿಲ್ಲೆಯೊಂದರಲ್ಲೇ 24 ರೋಗಿಗಳು ಆಮ್ಲಜನಕ ಸಿಗದೆ ಸಾವಿಗೀಡಾಗಿದ್ದಾರೆ. ಕೇವಲ 3 ಜನ ಮಾತ್ರ ಆಮ್ಲಜನಕ ಸಿಗದೆ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿರುವುದು ಶುದ್ಧ ಸುಳ್ಳು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆಗನುಗುಣವಾಗಿ ಪ್ರತಿನಿತ್ಯ ಕನಿಷ್ಟ 350 ಆಕ್ಸಿಜನ್ ಸಿಲಿಂಡರ್ ಅಗತ್ಯವಿದೆ, ಆದರೆ ಕಳೆದ ಭಾನುವಾರ ಸರಬರಾಜು ಆದದ್ದು ಕೇವಲ 126 ಸಿಲಿಂಡರ್. ಹೀಗಾಗಿ ಸಂಜೆಯ ವೇಳೆಗೆ ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಖಾಲಿಯಾಗಿ ರೋಗಿಗಳು ಸಾವಿಗೀಡಾಗಿದ್ದಾರೆ ಅವರ ಆರೋಪಿಸಿದ್ದಾರೆ

ಚಾಮರಾಜನಗರ ಜಿಲ್ಲಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ಬಗ್ಗೆ ನಾನು ಪ್ರಶ್ನಿಸಿದಾಗ “ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ, ನಾವು ಆಕ್ಸಿಜನ್ ವ್ಯವಸ್ಥೆ ಮಾಡುವ ಎಷ್ಟೇ ಪ್ರಯತ್ನ ಮಾಡಿದರೂ ಅದರಿಂದ ಪ್ರಯೋಜನವಾಗಿಲ್ಲ” ಎಂಬ ಸತ್ಯಸಂಗತಿಯನ್ನು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಆರೋಗ್ಯ ಸಚಿವರು ಏನಂತಾರೆ? ಘಟನೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಸಚಿವರು ಈ ಮೂವರ ಹೇಳಿಕೆಗಳು ಭಿನ್ನವಾಗಿವೆ. ಹಾಗಾಗಿ ಸತ್ಯ ಯಾವುದು? ಸುಳ್ಳು ಯಾವುದು? ಎಂದು ಜನರಿಗೆ ತಿಳಿಯಬೇಕಾದರೆ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ದುರಂತದಲ್ಲಿ ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದಾದರೆ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ. ಸ್ವತಂತ್ರ ತನಿಖಾಸಂಸ್ಥೆಯಿಂದ ತನಿಖೆಯಾಗದ ಹೊರತು ಸತ್ಯಾಸತ್ಯತೆ ಹೊರಬರುವ ವಿಶ್ವಾಸವಿಲ್ಲ. ತಮ್ಮ ಬೇಜವಾಬ್ದಾರಿಯಿಂದ 24 ಜನ ರೋಗಿಗಳ ಸಾವಿಗೆ ಕಾರಣರಾದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಘಟನೆಯ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇನೆ. ಇವರಿಗೆ ಮಾನ ಮರ್ಯಾದಿಯಿದ್ದರೆ ತಮ್ಮ ಹುದ್ದೆಯಲ್ಲಿ ಇನ್ನು ಒಂದು ಕ್ಷಣವೂ ಮುಂದುವರೆಯಲಾರರು ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಎರಡನೇ ಅಲೆ ಆರಂಭವಾಗಿ ಇಷ್ಟು ದಿನಗಳಾಯಿತು, ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಈ ವರೆಗೆ ಕೋವಿಡ್ ನಿರ್ವಹಣೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ, ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಇವರು ಎಚ್ಚರವಾಗೋಕೆ ಇನ್ನೆಷ್ಟು ಅಮಾಯಕರು ಸಾಯಬೇಕು? ಘಟನೆಯಲ್ಲಿ ಸಾವಿಗೀಡಾದವರಲ್ಲಿ ಬಹುತೇಕರು ಬಡವರು, ಕುಟುಂಬಕ್ಕೆ ಆಧಾರವಾಗಿದ್ದವರು, ಯುವಕರೇ ಆಗಿದ್ದಾರೆ. ಸರ್ಕಾರದ ಬೇಜವಾಬ್ದಾರಿಗೆ ಇಂದು ಅನೇಕ ಕುಟುಂಬಗಳು ಬೀದಿಪಾಲಾಗಿವೆ. ಹಾಗಾಗಿ ಮೃತ ರೋಗಿಗಳ ಕುಟುಂಬಕ್ಕೆ ತಲಾ ರೂ.25 ಲಕ್ಷ ಪರಿಹಾರವನ್ನು ಈ ಕೂಡಲೇ ರಾಜ್ಯ ಸರ್ಕಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು