ಮಂಜೇಶ್ವರ (05-10-2020): ಹತ್ರಾಸ್ ಅತ್ಯಾಚಾರ ಪ್ರಕರಣ ಖಂಡಿಸಿ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಮಂಜೇಶ್ವರದಲ್ಲಿ ಪ್ರತಿಭಟನೆ ನಡೆಯಿತು.
ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ದಲಿತ ಹೆಣ್ಣನ್ನು ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳನ್ನು ಸಂರಕ್ಷಿಸುವ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ ಸರಕಾರದ ವಿರುದ್ಧ ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿ ಪೇಟೆಯಲ್ಲಿ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಲಾಯಿತು.
ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಪಾಪಿಗಳು ಬಾಲಕಿಯನ್ನು ಅತ್ಯಾಚಾರಗೈದು ಕೊಲೆಗೈದರೆ, ಯೋಗಿ ಸರಕಾರದ ಪೊಲೀಸರು ಬಾಲಕಿಯ ಮೃತದೇಹವನ್ನು ಕುಟುಂಬಸ್ಥರಿಗೆ ಕೊಡದೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ, ದೇಶದಲ್ಲಿನ ಅತ್ಯಾಚಾರಿಗಳಿಗೆ ಬಿಜೆಪಿ ಸರಕಾರವೇ ಶ್ರೀರಕ್ಷೆಯಾಗಿದೆ ಎಂದು ಅವರು ಆರೋಪಿಸಿದರು. ಹತ್ರಾಸ್ ಸಂತ್ರಸ್ತ ಕುಟುಂಬವನ್ನು ಸಂದರ್ಶಿಸಲು ತೆರಳಿದ ರಾಹುಲ್ ಗಾಂಧೀ ಮೇಲೆ ಹಲ್ಲೆ ನಡೆಸಿದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರದ ಪೊಲೀಸರು, ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವುದು ದೇಶದ ಬಹುದೊಡ್ಡ ದುರಂತ, ಹತ್ರಾಸ್ ಅತ್ಯಾಚಾರ ಪ್ರಜಾಪ್ರಭುತ್ವದ ಮೇಲಿನ ಸಾಮೂಹಿಕ ಅತ್ಯಾಚಾರ ಎಂದು ಅವರು ಹೇಳಿದರು.
ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿ ಅದ್ಯಕ್ಷ ಇರ್ಷಾದ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದು, ಶರೀಫ್ ಪಿ.ಕೆ.ನಗರ್ ಸ್ವಾಗತಿಸಿದರು. ನೇತಾರರಾದ ನಾಗೇಶ್ ಮಂಜೇಶ್ವರ, ಇಕ್ಬಾಲ್ ಕಳಿಯೂರು, ಮಾಲಿಂಗ ಮಂಜೇಶ್ವರ, ಮನ್ಸೂರ್ ಕಂಡತ್ತಿಲ್, ಅಝೀಝ್ ಕಲ್ಲೂರು, ಜಗದೀಶ ಮೂಡಂಬೈಲು, ತಮೀಮ್, ಖಲೀಲ್ ಬಜಾಲ್, ಮನ್ಸೂರ್ ಬಿ.ಎಂ, ಕೆಎಸ್ ಯು ಮುಖಂಡರಾದ ಮುಆಜ್, ಅಸ್ಲಂ, ಶುಹೈಬ್, ಮುಂತಾದವರು ಉಪಸ್ಥಿತರಿದ್ದರು. ಆರಿಫ್ ಮಚ್ಚಂಪಾಡಿ ವಂದಿಸಿದರು.