ಕೊಲ್ಕತ್ತಾ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕೆಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆಗ್ರಹಿಸಿದ್ದಾರೆ.
ಟಿಎಂಸಿ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಮರುಆಯ್ಕೆಗೊಂಡ ನಂತರ ಮಾತನಾಡಿದ ಮಮತಾ, ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ ಆ ಪಕ್ಷದ ‘ಅಹಂ’ ನಿಂದ ಹಿಂದೆ ಉಳಿಯಬೇಕೆಂದು ಬಯಸಿದರೆ ಅದಕ್ಕೆ ನನ್ನ ಪಕ್ಷವನ್ನು ದೂರುವ ಹಾಗಿಲ್ಲ ಎಂದಿದ್ದಾರೆ.
“ಎಲ್ಲರೂ ಜತೆಯಾಗಿ ಬಿಜೆಪಿಯನ್ನು ಸೋಲಿಸಬೇಕೆಂಬುದು ನಮ್ಮ ಆಸೆ. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ,. ಸಿಪಿಎಂ ಅನ್ನು ಪಶ್ಚಿಮ ಬಂಗಾಳದಲ್ಲಿ ನಮಗೆ ಸೋಲಿಸಬಹುದಾದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನೂ ಸೋಲಿಸಬಹುದು” ಎಂದು ಅವರು ಹೇಳಿದರು.
“ಅಗತ್ಯ ಬಿದ್ದರೆ ನಾವು ಏಕಾಂಗಿಯಾಗಿ ಬಿಜೆಪಿ ವಿರುದ್ಧ ಹೋರಾಡುತ್ತೇವೆ” ಎಂದು ಮಮತಾ ಹೇಳಿದರು. ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು ಅದು ಜನರನ್ನು ಮೂರ್ಖರನ್ನಾಗಿಸುವ ‘ದೊಡ್ಡ ಸುಳ್ಳು’ ಎಂದರು.
“ಅದರಲ್ಲಿ ಜನಸಾಮಾನ್ಯರಿಗೆ ಏನೂ ಇಲ್ಲ. ಕೇವಲ ಇಬ್ಬರು ವ್ಯಕ್ತಿಗಳು ಭಾರತದ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ದೇಶದ ಜನರಿಗೆ ಉದ್ಯೋಗ ಮತ್ತು ಆಹಾರ ಬೇಕು, ಅವರಿಗೆ ವಜ್ರ ಬೇಡ” ಎಂದು ಅವರು ಹೇಳಿದರು.
“ಪದ್ಮ ಭೂಷಣದಂತಹ ಪ್ರಶಸ್ತಿ ನೀಡಿಕೆಯಲ್ಲೂ ರಾಜಕೀಯವಿದೆ. ಸಂಧ್ಯಾ ಮುಖ್ಯೋಪಾಧ್ಯಾಯ ಅವರಂತಹ ಹಿರಿಯ ಗಾಯಕಿಗೆ ಈ ರೀತಿ ಹೇಗೆ ಅವಮಾನಿಸಬಹುದು? ಆಕೆ ಈಗ ಆಸ್ಪತ್ರೆಯಲ್ಲಿದ್ದಾರೆ. ಸರಕಾರದ ವಿರುದ್ಧ ಮಾತಾಡಿದರೆ ಬೆದರಿಕೆಯೊಡ್ಡಿ ಪೆಗಾಸಸ್ ಬಳಸಿ ಫೋನ್ಗಳನ್ನು ಟ್ಯಾಪ್ ಮಾಡುತ್ತಾರೆ” ಎಂದು ಅವರು ಆರೋಪಿಸಿದರು.
