ಅಸ್ಸಾಂ(10-10-2020): ಅಸ್ಸಾಂ ಸರ್ಕಾರ ಎಲ್ಲಾ ಸರ್ಕಾರಿ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲಿದೆ ಎಂದು ರಾಜ್ಯ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಈ ಬಗ್ಗೆ ನಾವು ಈ ಹಿಂದೆ ರಾಜ್ಯ ವಿಧಾನಸಭೆಯಲ್ಲಿ ಘೋಷಿಸಿದ್ದೆವು. ಸರ್ಕಾರದ ಧನಸಹಾಯದೊಂದಿಗೆ ಯಾವುದೇ ಧಾರ್ಮಿಕ ಶಿಕ್ಷಣ ಇರಬಾರದು. ಖಾಸಗಿಯಾಗಿ ನಡೆಸುವ ಮದರಸಾ ಮತ್ತು ಸಂಸ್ಕೃತ ಶಾಲೆಗಳ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ನವೆಂಬರ್ನಲ್ಲಿ ಔಪಚಾರಿಕ ಅಧಿಸೂಚನೆ ಹೊರಡಿಸಲಿದೆ ಎಂದು ಶರ್ಮಾ ಹೇಳಿದ್ದಾರೆ.
ಸರ್ಕಾರದ ಪ್ರಕಟಣೆಯ ನಂತರ, ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ, ಸರ್ಕಾರ ನಡೆಸುವ ಮದರಸಾಗಳನ್ನು ಮುಚ್ಚಿದರೆ, ಮುಂದಿನ ವರ್ಷದ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬಂದ ನಂತರ ನಾವು ಮತ್ತೆ ತೆರೆಯುತ್ತೇವೆ ಎಂದು ಹೇಳಿದ್ದಾರೆ.
ಮದರಸಾಗಳನ್ನು ಮುಚ್ಚಲಾಗುವುದಿಲ್ಲ. ಬಿಜೆಪಿ ಸರ್ಕಾರವು ಅವುಗಳನ್ನು ಬಲವಂತವಾಗಿ ಮುಚ್ಚಿದರೆ ನಾವು 50-60 ವರ್ಷಗಳಷ್ಟು ಹಳೆಯದಾದ ಮದರಸಾಗಳನ್ನು ಮತ್ತೆ ತೆರೆಯುತ್ತೇವೆ ಎಂದು ಲೋಕಸಭಾ ಸದಸ್ಯ ಅಜ್ಮಲ್ ಹೇಳಿದರು.