ಲಕ್ನೋ(19-12-2020): ಉತ್ತರ ಪ್ರದೇಶದ ನೂತನ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ದಾಖಲಾದ ಮೊದಲ ಕೇಸ್ ಗೆ ಸಂಬಂಧಿಸಿದಂತೆ 32 ವರ್ಷದ ಮುಸ್ಲಿಂ ವ್ಯಕ್ತಿಗೆ ಹೈಕೋರ್ಟ್ ಬಂಧನದಿಂದ ರಕ್ಷಣೆಯನ್ನು ನೀಡಿದೆ.
ಗುತ್ತಿಗೆದಾರರಾಗಿ ಔಷಧೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅಕ್ಷಯ್ ಕುಮಾರ್ ತ್ಯಾಗಿ ಎಂಬಾತ ಪಶ್ಚಿಮ ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ಕಳೆದ ತಿಂಗಳು ಸಲ್ಲಿಸಿದ್ದ ದೂರಿನಲ್ಲಿ ನದೀಮ್ ಮತ್ತು ಅವರ ಸಹೋದರ ಸಲ್ಮಾನ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ದೂರಿನಲ್ಲಿ ತನ್ನ ಪತ್ನಿ ಪರುಲ್ನನ್ನು ಮತಾಂತರಗೊಳಿಸುವ ಉದ್ದೇಶದಿಂದ “ಪ್ರೀತಿಯ ಬಲೆಯಲ್ಲಿ” ಸಿಕ್ಕಿಹಾಕಿಸಿಕೊಂಡಿದ್ದಾನೆ ಎಂದು ಅಕ್ಷಯ್ ಉಲ್ಲೇಖಿಸಿದ್ದರು.
ಎಫ್ಐಆರ್ ನ್ನು ರದ್ದುಗೊಳಿಸುವಂತೆ ನದೀಮ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೊಂಡ ಅಲಹಾಬಾದ್ ಹೈಕೋರ್ಟ್, ಪೊಲೀಸರು ಆತನ ವಿರುದ್ಧ ಇನ್ನೂ ಯಾವುದೇ ಬಲವಂತದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಬಂಧನದಿಂದ ರಕ್ಷಣೆ ನೀಡುತ್ತೇವೆ ಎಂದು ಹೇಳಿದೆ. ನದೀಮ್ ದಬ್ಬಾಳಿಕೆಯ ಮೂಲಕ ಮತಾಂತರಕ್ಕೆ ಯತ್ನಿಸಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಂತ್ರಸ್ತೆ ಎನ್ನುವವಳು ತನ್ನ ಯೋಗಕ್ಷೇಮವನ್ನು ಅರ್ಥಮಾಡಿಕೊಳ್ಳುವ ವಯಸ್ಕಳು. ಅವಳು ಮತ್ತು ಅರ್ಜಿದಾರರಿಗೆ ಗೌಪ್ಯತೆಗೆ ಮೂಲಭೂತ ಹಕ್ಕಿದೆ ಮತ್ತು ಅವರ ವಯಸ್ಕರಾಗಿದ್ದು, ಅವರಿಗೆ ಸಂಬಂಧದ ಪರಿಣಾಮಗಳ ಬಗ್ಗೆ ತಿಳಿದಿದೆ ಎಂದು ನ್ಯಾಯಾಲಯವು ಪ್ರಮುಖ ಹೇಳಿಕೆಯಲ್ಲಿ ತಿಳಿಸಿದೆ.