ಉತ್ತರಾಖಂಡ(06-02-2021):ಅಸ್ತಿತ್ವದಲ್ಲೇ ಇಲ್ಲದ ಲೋಕಾಯುಕ್ತ ಹೆಸರಿನಲ್ಲಿ ಉತ್ತರಾಖಾಂಡ್ ಸರಕಾರ 13 ಕೋಟಿ ರೂ.ಗಿಂತ ಹೆಚ್ಚು ವೆಚ್ಚ ಮಾಡಿರುವ ಭ್ರಷ್ಟಾಚಾರ ಪ್ರಕರಣ ಇದೀಗ ಬಹಿರಂಗವಾಗಿದೆ.
ಆರ್ಟಿಐ ಮಾಹಿತಿಯಿಂದ ಈ ಭ್ರಷ್ಟಾಚಾರ ಬಹಿರಂಗವಾಗಿದೆ. ಕಾಶಿಪುರ ಮೂಲದ ಸಾಮಾಜಿಕ ಕಾರ್ಯಕರ್ತ ನದೀಮುದ್ದೀನ್ ಪ್ರಶ್ನೆಗೆ ಉತ್ತರಿಸಿದ ಆರ್ ಟಿಐ ಈ ಮಹತ್ವದ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ಲೋಕಾಯುಕ್ತ ಕಚೇರಿಯಲ್ಲಿ ಒಟ್ಟು 1,543 ದೂರುಗಳು ಬಾಕಿ ಉಳಿದಿವೆ, ಆದರೆ 7 ವರ್ಷಗಳಲ್ಲಿ 13.38 ಕೋಟಿ ರೂ. ಖರ್ಚು ಮಾಡಲಾಗಿದೆ. 2013-14ರ ಆರ್ಥಿಕ ವರ್ಷದಿಂದ 2020 ಸೆಪ್ಟೆಂಬರ್ ವರೆಗೆ ಈ ಪ್ರಮಾಣದ ವೆಚ್ಚ ಮಾಡಲಾಗಿದೆ.
2014 ರ ಅಕ್ಟೋಬರ್ 15 ರಂದು ಕಡೆಯ ಬಾರಿಗೆ ಕಚೇರಿಯಲ್ಲಿ ದೂರು ಪಡೆಯಲಾಗಿದೆ. ಆ ಬಳಿಕ ಯಾವುದೇ ಚಟುವಟಿಕೆಗಳು ನಡೆಯದಿದ್ದರೂ 13 ಕೋಟಿಯನ್ನು ವೆಚ್ಚಮಾಡಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ಆಗಬೇಕಿದೆ ನದೀಮುದ್ದೀನ್ ಹೇಳಿದ್ದಾರೆ.