ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಬಿ.ಎಸ್. ಯಡಿಯೂರಪ್ಪ ಅವರು ತಜ್ಞರ ಸಲಹಾ ಸಮಿತಿ ಜೊತೆಗೆ ಇಂದು ಕೊರೋನಾ ಸಭೆ ನಡೆಸಿದ್ದಾರೆ.
ತಜ್ಞರು ಇದು ಕೊರೋನಾ ಎರಡನೇ ಅಲೆ ಎಂದು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಲಾಕ್ ಡೌನ್ ಹೇರುವುದು ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಕೊರೋನಾ ಸಭೆ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಆಗಬಾರದು ಎಂದು ನಿಜವಾಗಿಯೂ ಅಪೇಕ್ಷೆ ಇದ್ದರೆ ದಯವಿಟ್ಟು ಎಲ್ಲರೂ ಸಹಕಾರ ಕೊಡಬೇಕು. ಯಾವುದೇ ಜಾತ್ರೆ, ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸುವುದು , ಅಂತರ ಕಾಪಾಡುವುದು ಕಡ್ಡಾಯವಾಗಿ ಪಾಲಿಸಬೇಕು.
ಸದ್ಯಕ್ಕೆ ಯಾವುದೇ ರೀತಿಯ ನೈಟ್ ಕರ್ಫ್ಯೂ, ಲಾಕ್ ಡೌನ್ ಇಲ್ಲ. ಆದರೆ ಕಟ್ಟುನಿಟ್ಟಿನ ಕ್ರಮಗಳನ್ನು ಎಲ್ಲರೂ ಪಾಲಿಸುವ ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ಜನರು ಸಹಕರಿಸಬೇಕು.
ಕೊರೋನಾ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಫಿಕ್ಸ್ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ. ಹಾಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ಮುಖ್ಯಮಂತ್ರಿಗಳ ಜೊತೆಗೆ ಕೊರೋನಾ ಕುರಿತು ಮಾರ್ಚ್ 17ರಂದು ಸಭೆ ಕರೆದಿದ್ದಾರೆ ಎಂದು ಹೇಳಿದರು.
ಕೊರೋನಾ ಪರಿಸ್ಥಿತಿ ಅವಲೋಕಿಸಿ ನಂತರದ ದಿನಗಳಲ್ಲಿ ದಂಡ ಹೇರುವ ಬಗ್ಗೆ ಚಿಂತನೆ ನಡೆಸುತ್ತೇವೆ. ಹೀಗಾಗಿ ರಾಜ್ಯದ ಜನರು ಸಹಕಾರ ಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಜನರಿಗೆ ವಿನಂತಿ ಮಾಡಿದ್ದಾರೆ.