ನವದೆಹಲಿ(09-10-2020): ಲಿಬಿಯಾದಲ್ಲಿ 7ಮಂದಿ ಭಾರತೀಯರನ್ನು ಅಪಹರಣ ಮಾಡಲಾಗಿದೆ ಅವರನ್ನು ಮರಳಿ ಭಾರತಕ್ಕೆ ಕರೆತರುವಲ್ಲಿ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಆಂಧ್ರಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರ ಪ್ರದೇಶದ ಏಳು ಮಂದಿ ನಿರ್ಮಾಣ ಮತ್ತು ತೈಲ ಸರಬರಾಜಿನಲ್ಲಿ ಕೆಲಸ ಮಾಡುತ್ತಿದ್ದು, ಸೆಪ್ಟೆಂಬರ್ 14 ರಂದು ಅಶ್ವರೀಫ್ ಎಂಬ ಸ್ಥಳದಿಂದ ಅಪಹರಣಕ್ಕೊಳಗಾಗಿದ್ದಾರೆ.
ಇವರೆಲ್ಲರೂ ಭಾರತಕ್ಕೆ ಮರಳಲು ಟ್ರಿಪೊಲಿಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪಹರಣ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಅವರ ಬಿಡುಗಡೆಗಾಗಿ ವಿದೇಶಾಂಗ ಸಚಿವಾಲಯವು ಲಿಬಿಯಾ ಸರ್ಕಾರ ಮತ್ತು ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು. ಟುನೀಶಿಯಾದ ಭಾರತೀಯ ರಾಯಭಾರ ಕಚೇರಿಯೂ ಅವರ ಬಿಡುಗಡೆಗಾಗಿ ಕೆಲಸ ಮಾಡುತ್ತಿದೆ.
ಎಲ್ಲಾ ಏಳು ಭಾರತೀಯರು ಸುರಕ್ಷಿತರು, ಅವರ ಛಾಯಾಚಿತ್ರಗಳನ್ನು ತೋರಿಸಲಾಗಿದೆ ಮತ್ತು ಅಪಹರಣಕ್ಕೊಳಗಾದವರ ಕುಟುಂಬಗಳೊಂದಿಗೆ ಸಚಿವಾಲಯವು ಸಂಪರ್ಕದಲ್ಲಿದೆ ಎಂದು ತಿಳಿಸಲಾಗಿದೆ.