ಟುನಿಸ್(12-10-2020): ಲಿಬಿಯಾದಲ್ಲಿ ಅಪಹರಣಕ್ಕೊಳಗಾದ 7 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಟುನೀಶಿಯಾದ ಭಾರತೀಯ ರಾಯಭಾರಿ ತಿಳಿಸಿದ್ದಾರೆ.
ಆಂಧ್ರಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರಪ್ರದೇಶದ ಮೂಲದ ಏಳು ಮಂದಿಯನ್ನು ಸೆಪ್ಟೆಂಬರ್ 14 ರಂದು ಲಿಬಿಯಾದ ಅಶ್ವೆರಿಫ್ ನಿಂದ ಅಪಹರಿಸಲಾಗಿತ್ತು.
ಟುನೀಶಿಯಾದ ಭಾರತೀಯ ರಾಯಭಾರಿ ಪುನೀತ್ ರಾಯ್ ಕುಂಡಾಲ್ ಅವರು ಬಿಡುಗಡೆಯಾದ ಬಗ್ಗೆ ದೃಢ ಪಡಿಸಿದ್ದಾರೆ. ಭಾರತಕ್ಕೆ ಲಿಬಿಯಾದಲ್ಲಿ ರಾಯಭಾರ ಕಚೇರಿ ಇಲ್ಲ ಮತ್ತು ಟುನೀಶಿಯಾದ ಭಾರತೀಯ ಮಿಷನ್ ಲಿಬಿಯಾದಲ್ಲಿ ಭಾರತೀಯರ ಕಲ್ಯಾಣವನ್ನು ನೋಡಿಕೊಳ್ಳುತ್ತದೆ.
ಕಳೆದ ತಿಂಗಳು ಭಾರತದ ಏಳು ಪ್ರಜೆಗಳನ್ನು ಲಿಬಿಯಾದಲ್ಲಿ ಅಪಹರಿಸಲಾಗಿತ್ತು. ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಿಬಿಯಾಕ್ಕೆ ಪ್ರಯಾಣಿಸುವುದನ್ನು ತಪ್ಪಿಸಲು ಭಾರತೀಯ ಪ್ರಜೆಗಳಿಗೆ 2015 ರಲ್ಲೇ ಸಲಹೆ ನೀಡಲಾಗಿತ್ತು.