ನವದೆಹಲಿ(12-12-2020): ಬಿಹಾರದ ಮಾಜಿ ಮುಖ್ಯಮಂತ್ರಿಯೂ, ಮಾಜಿ ಕೇಂದ್ರ ಸಚಿವರೂ ಆದ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿಯು ಗಂಭೀರವಾಗಿದೆಯೆಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ. ಮೂತ್ರಪಿಂಡದ ಕಾರ್ಯಕ್ಷಮತೆಯ ವಿಚಾರದಲ್ಲಿ ತೀವ್ರವಾದ ಕಳವಳವಿದೆಯೆಂದು ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.
ಲಾಲೂ ಅವರ ಮೂತ್ರ ಪಿಂಡಗಳ ಕಾರ್ಯ ಚಟುವಟಿಕೆಗಳು ಯಾವಾಗ ಬೇಕಾದರೂ ನಿಂತು ಹೋಗುವ ಸಾಧ್ಯತೆಯಿದೆ. ಇದೊಂದು ಆತಂಕಕಾರೀ ವಿಚಾರವಾಗಿದ್ದು, ಈ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿರುವುದಾಗಿ ವೈದ್ಯರಾದ ಉಮೇಶ್ ಪ್ರಸಾದ್ ಹೇಳಿದ್ದಾರೆ.
1990 ರ ಮೇವು ಹಗರಣದಲ್ಲಿ ಸಿಲುಕಿದ್ದ ಲಾಲೂ 2017 ರಲ್ಲಿ ಬಂಧನಕ್ಕೆ ಒಳಗಾಗಿದ್ದರು. 2018 ರಲ್ಲಿ ಅವರ ಅರೋಗ್ಯ ಸ್ಥಿತಿಯು ಕೈ ಕೊಟ್ಟ ಕಾರಣದಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲಾಲೂ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರವಷ್ಟೇ ಆರು ವಾರಗಳಿಗೆ ಮುಂದೂಡಿತ್ತು.