ಲಜ್ಜೆಗೆಟ್ಟ ರಾಜಕಾರಣವೂ ಮಾನಗೆಟ್ಟ ಮಾಧ್ಯಮವೂ

Share on facebook
Share on twitter
Share on linkedin
Share on whatsapp
Share on telegram
Share on email
Share on print

– ನಾ ದಿವಾಕರ

ಪ್ರಜಾಪ್ರಭುತ್ವ ವ್ಯವಸ್ಥೆಯ ವೈಶಿಷ್ಟ್ಯ ಎಂದರೆ ಇಲ್ಲಿ ಆಳುವವರು ಜನರಿಂದ ಪಾಠ ಕಲಿಯಬೇಕಾಗುತ್ತದೆ. ಆಳುವವರ ಪ್ರತಿಯೊಂದು ವರ್ತನೆಯನ್ನೂ ಗಮನಿಸುವ ಸೂಕ್ಷ್ಮಮತಿಗಳಿರುವ ಒಂದು ಸಮಾಜದಲ್ಲಿ ಪ್ರಜಾಪ್ರಭುತ್ವ ಪರಿಪೂರ್ಣತೆಯನ್ನು ಪಡೆಯದಿದ್ದರೂ, ಅಧೋಗತಿ ಕಾಣುವುದನ್ನು ತಪ್ಪಿಸಲು ಸಾಧ್ಯ. ತಮ್ಮ ಆಡಳಿತ ನೀತಿ, ತಾವು ಜಾರಿಗೊಳಿಸುವ ಕಾನೂನು, ಶಾಸನಸಭೆಗಳಲ್ಲಿ ತಮ್ಮ ವಿಷಯಮಂಡನೆ ಮತ್ತು ಚರ್ಚೆಗಳು, ಸಾರ್ವಜನಿಕ ವಲಯದಲ್ಲಿ ತಮ್ಮ ನಡತೆ, ಜನಸಾಮಾನ್ಯರ ಬಗ್ಗೆ ತಮ್ಮ ಧೋರಣೆ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ತಮ್ಮನ್ನು ಗಮನಿಸುವ ಒಂದು ಜನಸಮೂಹ ಮುಂಬರುವ ಚುನಾವಣೆಗಳಲ್ಲಿ ತಮ್ಮನ್ನು ಪ್ರಶ್ನಿಸಲು ಸಿದ್ಧವಾಗಿದೆ ಎಂಬ ಭಾವನೆ ಚುನಾಯಿತ ಪ್ರತಿನಿಧಿಗಳಲ್ಲಿ ಮೂಡಿಬಿಟ್ಟರೆ ಅದು ಗಣತಂತ್ರದ ಸಾರ್ಥಕತೆ ಎನ್ನಬಹುದು.

 

ಭಾರತವೂ ಕೆಲವು ದಶಕಗಳ ಹಿಂದೆ ಹೀಗಿತ್ತು. ಪರಿಪೂರ್ಣ ಎನ್ನಲಾಗದಿದ್ದರೂ ಕೊಂಚ ಮಟ್ಟಿಗೆ ಜನಪ್ರತಿನಿಧಿಗಳು ಬೇಲಿ ಹಾರುವ ಮುನ್ನ ಅತ್ತಿತ್ತ ಕಣ್ಣು ಹಾಯಿಸುವಷ್ಟು ನೈತಿಕ ಭಯ ಹೊಂದಿರುತ್ತಿದ್ದರು. ನುಸುಳುಕೋರರು ಇದ್ದಿರಬಹುದಾದರೂ ಕಡಿಮೆ ಪ್ರಮಾಣದಲ್ಲಿ ಎನ್ನಬಹುದು. ನೈತಿಕತೆ ಎನ್ನುವುದು ಸಾರ್ವಜನಿಕ ಬದುಕಿನ ಒಂದು ಅವಿಭಾಜ್ಯ ಅಂಗವಾಗಿತ್ತು. ಈ ನಿಟ್ಟಿನಲ್ಲಿ 1970ರ ದಶಕದ ರಾಜಕಾರಣ ಗತ ಇತಿಹಾಸದಂತೆಯೇ ಕಾಣುತ್ತದೆ. ಒಬ್ಬ ಪುರಸಭಾ ಸದಸ್ಯರಲ್ಲೂ ಸಹ ಈ ಸಾರ್ವಜನಿಕ ಪ್ರಜ್ಞೆ ಸದಾ ಜಾಗೃತವಾಗಿರುತ್ತಿದ್ದುದು ಅಂದಿನ ದಿನಗಳ ವೈಶಿಷ್ಟ್ಯ. ನಾವು ಜನರಿಂದ ಆಯ್ಕೆಯಾಗಿದ್ದೇವೆ, ಜನತೆ ನಮ್ಮ ಮೇಲೆ ಹೊಣೆ ಹೊರಿಸಿದ್ದಾರೆ, ಅದನ್ನು ಪೂರೈಸುವ ಕರ್ತವ್ಯ ನಮ್ಮದು ಎನ್ನುವ ಸಾರ್ವತ್ರಿಕ ಪ್ರಜ್ಞೆ ಅಂದಿನ ಬಹುತೇಕರಲ್ಲಿ ಇರುತ್ತಿತ್ತು.

 

ಆಗಲೂ ಪಕ್ಷಗಳಿದ್ದವು, ತತ್ವ ಸಿದ್ಧಾಂತಗಳಿದ್ದವು, ಎಡ ಬಲಗಳಿದ್ದವು, ತಟಸ್ಥರಿದ್ದರು, ಪಕ್ಷಾಂತರಿಗಳಿದ್ದರು, ವಂದಿಮಾಗಧರೂ ಇದ್ದರು, ವಿಶ್ವಾಸಘಾತುಕರೂ ಇದ್ದರು. ಅಧಿಕಾರ ರಾಜಕಾರಣದಲ್ಲಿ ಇವೆಲ್ಲವೂ ಮರೆಯಾಗಿಬಿಟ್ಟರೆ ಬಹುಶಃ ರಾಜಕೀಯ ಕ್ಷೇತ್ರವೇ ಇಲ್ಲವಾಗಿಬಿಡುತ್ತದೆ. ಹಾಗಾಗಿ ಇವೆಲ್ಲವನ್ನೂ ಸಾರ್ವತ್ರಿಕ ಅನಿವಾರ್ಯತೆಗಳು ಎಂದೇ ಭಾವಿಸೋಣ, ಅಡ್ಡಿಯಿಲ್ಲ. ಆದರೆ ಇವೆಲ್ಲವನ್ನೂ ಮೀರಿದ ಒಂದು ಸಾರ್ವಜನಿಕ ಪ್ರಜ್ಞೆ, ವಿವೇಕ, ವಿವೇಚನೆ,  ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆ ಅಂದಿನ ರಾಜಕಾರಣದಲ್ಲಿ ಪ್ರಧಾನ ಭೂಮಿಕೆ ವಹಿಸುತ್ತಿದ್ದವು. ಪಕ್ಷ ನಿಷ್ಠೆ ಎಷ್ಟೇ ಗಾಢವಾಗಿದ್ದರೂ ಅಂದು ಪ್ರಜ್ಞಾವಂತ ದನಿ ಸತ್ತಿರಲಿಲ್ಲ. ತನ್ನ ಸ್ಥಾನ ಕಳೆದುಕೊಂಡರೂ ಅಡ್ಡಿಯಿಲ್ಲ ಎಂದು ಭಾವಿಸಿ ಪಕ್ಷದ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿದ ಹಲವು ರಾಜಕಾರಣಿಗಳ ಇತಿಹಾಸವೇ ನಮ್ಮ ಕಣ್ಣ ಮುಂದಿದೆ. ತಾತ್ವಿಕ ನಿಷ್ಠೆಗಾಗಿ ಅಧಿಕಾರದ ಹುದ್ದೆ ತೊರೆದವರು ಅನೇಕರಿದ್ದರು.

 

ಇಂದು ಎಲ್ಲವೂ ಅಯೋಮಯವಾದಂತಿದೆ. ಕಳೆದ ಮೂರು ದಶಕಗಳ ರಾಜಕಾರಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಈ ಅವಧಿಯ ಸಾಂಸ್ಕೃತಿಕ ರಾಜಕಾರಣ ಜನಪ್ರತಿನಿಧಿಗಳನ್ನು ಸಂಸ್ಕೃತಿಹೀನರನ್ನಾಗಿ ಮಾಡಿದೆ, ಮತೀಯ ರಾಜಕಾರಣ ಮತಾಂಧರನ್ನಾಗಿ ಮಾಡಿದೆ, ಅಧಿಕಾರ ರಾಜಕಾರಣ ಲೋಭಿಗಳನ್ನಾಗಿ ಮಾಡಿದೆ. ಯಾವ ಸಂಶೋಧನೆಯೂ ಇಲ್ಲದೆ ದೃಢಪಡಿಸಬಹುದಾದ ಅಂಶ ಇದು. ಅಧಿಕಾರ ಪೀಠಗಳಿಂದ, ಗೌರವಯುತ ಹುದ್ದೆಗಳಿಂದ ದೂರ ಇರಿಸಲು ಅನುಸರಿಸಲಾಗುತ್ತಿದ್ದ ಮಾನದಂಡಗಳೆಲ್ಲವೂ ಇಂದು ಅಧಿಕಾರ ಗಳಿಸುವ ಸುಲಭ ಮಾರ್ಗಗಳಾಗಿ ಪರಿಣಮಿಸಿವೆ. ಹಾಗಾಗಿಯೇ ಕಾಮುಕರು, ಲೋಭಿಗಳು, ಕೊಲೆಗಡುಕರು ರಾಜಕೀಯ ಅಧಿಕಾರಪೀಠಗಳಲ್ಲಿ ರಾರಾಜಿಸುತ್ತಿದ್ದಾರೆ.

 

ರಾಜಕೀಯ ಒತ್ತಡಗಳಿಗೆ ಮಣಿದು ಸಚಿವ ರಮೇಶ್ ಜಾರಕಿಹೊಳಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ಅತ್ಯಾಚಾರಕ್ಕೊಳಗಾದ ಮಹಿಳೆಯ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರಗಳು ಯಾವುದೇ ನಾಗರಿಕ ಸಮಾಜವನ್ನು ನಾಚಿ ತಲೆ ತಗ್ಗಿಸುವಂತೆ ಮಾಡಿವೆ.  ಇಡೀ ಪ್ರಕರಣದ ಕೇಂದ್ರ ಬಿಂದು ಆರೋಪಿಯಾಗಿರಬೇಕು ಆದರೆ ಇಲ್ಲಿ ಸಂತ್ರಸ್ತೆಯೇ ಕೇಂದ್ರ ಬಿಂದುವಾಗಿದ್ದಾರೆ. ಆಕೆ ತನ್ನ ಮೇಲಾದ ದೌರ್ಜನ್ಯವನ್ನು ನ್ಯಾಯ ವ್ಯವಸ್ಥೆಯ ಮುಂದೆ ಮಂಡಿಸಲು ಹರಸಾಹಸ ಪಡಬೇಕಾಗಿರುವುದೇ ನಮ್ಮ ಆಡಳಿತ ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿ. ಅತ್ಯಾಚಾರದ ಆರೋಪ ಎದುರಿಸುತ್ತಿರುವ ಪ್ರಭಾವಿ ರಾಜಕಾರಣಿ “ ತನ್ನನ್ನು ಬಂಧಿಸಿದರೆ ಸರ್ಕಾರವವನ್ನು ಉರುಳಿಸುವುದಾಗಿ ” ಬೆದರಿಕೆ ಹಾಕುತ್ತಿದ್ದರೆ, ಅತ್ಯಾಚಾರಕ್ಕೊಳಗಾದ ನೊಂದ ಮಹಿಳೆ ತನ್ನ ಅಹವಾಲು ಸಲ್ಲಿಸಲು ಗುಪ್ತ ಮಾರ್ಗಗಳನ್ನು ಅನುಸರಿಸಬೇಕಿದೆ. ಸಂಸ್ಕೃತಿ ಹೀನ ರಾಜಕಾರಣ ಎಂದರೆ ಇದೇ ಅಲ್ಲವೇ ?

 

ನಿನ್ನೆ ಸಂತ್ರಸ್ತ ಮಹಿಳೆ ನ್ಯಾಯಾಲಯಕ್ಕೆ ನೇರವಾಗಿ ಬಂದು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ಪಡೆ  ನ್ಯಾಯಾಂಗ ನಿಷ್ಠೆಗಿಂತಲೂ ಹೆಚ್ಚಾಗಿ ಸ್ವಾಮಿ ನಿಷ್ಠೆಯನ್ನೇ ಮೆರೆಯುವುದು ಗುಟ್ಟಿನ ಮಾತೇನಲ್ಲ. ಈ ಬೆಳವಣಿಗೆಗಳ ನಡುವೆ ಸಂತ್ರಸ್ತೆಯ ಕುಟುಂಬದವರ ಮೇಲೆ ಒತ್ತಡ ಹೇರಲಾಗಿದೆ. ತಮ್ಮ ಮಗಳನ್ನು ಅಪಹರಿಸಿ ಆಕೆಯಿಂದ ಸುಳ್ಳು ಹೇಳಿಕೆ ನೀಡಿಸಲಾಗಿದೆ ಎಂದು ಸಂತ್ರಸ್ತೆಯ ಪೋಷಕರು ಹೇಳಿರುವುದನ್ನು ನೋಡಿದರೆ ನಮ್ಮ ಸಮಾಜ ನೈತಿಕವಾಗಿ ಎಷ್ಟು ಪಾತಾಳಕ್ಕೆ ಕುಸಿದಿದೆ ಎಂದು ಅರ್ಥವಾಗುತ್ತದೆ. ತಮ್ಮ ಮಗಳು ಇಡೀ ರಾಜ್ಯ ರಾಜಕಾರಣದಿಂದ ಅವಮಾನಿತಳಾಗುತ್ತಿರುವಾಗ, ಸೂಕ್ಷ್ಮ ಸಂವೇದನೆ ಮತ್ತು ನಾಗರಿಕ ಸಂಸ್ಕೃತಿಯೇ ಇಲ್ಲದ ಮಾಧ್ಯಮಗಳಿಂದ ಅವಹೇಳನಕ್ಕೊಳಗಾಗುತ್ತಿರುವಾಗ, ಪೋಷಕರಾದವರು ಆ ಮಹಿಳೆಯ ಪರ ನಿಲ್ಲಬೇಕಲ್ಲವೇ ? ಹೆತ್ತ ಕರುಳನ್ನೂ ಖರೀದಿಸುವಷ್ಟು ಮಟ್ಟಿಗೆ ನಮ್ಮ ರಾಜಕಾರಣ ಬೆಳೆದು ನಿಂತಿದೆ. ಕೇವಲ ಲೋಭಿಗಳ ಸಾಮ್ರಾಜ್ಯದಲ್ಲಿ ಮಾತ್ರವೇ ಇದು ಸಾಧ್ಯ.


ಸಂತ್ರಸ್ತ ಮಹಿಳೆ ಈಗ ನ್ಯಾಯಾಲಯದ ಮುಂದೆ ರಹಸ್ಯವಾಗಿ ತನ್ನ ಹೇಳಿಕೆ ನೀಡಿದ್ದಾಗಿದೆ. ಈ ಹೇಳಿಕೆಯನ್ನಾಧರಿಸಿ ಆರೋಪಿಯ ವಿರುದ್ಧ ಕ್ರಮ ಜರುಗಿಸಬೇಕಿದೆ. ಇಷ್ಟರ ನಡುವೆಯೇ ರಾಜ್ಯದ ಮುಖ್ಯಮಂತ್ರಿ, ರಮೇಶ್ ಜಾರಕಿಹೊಳಿ ನಿರಪರಾಧಿಯಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇದು ಇಡೀ ಪ್ರಕರಣದ ತನಿಖೆ, ವಿಚಾರಣೆ ಮತ್ತು ನ್ಯಾಯ ವಿತರಣೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎನ್ನುವುದರ ಸೂಚಕ ಎನಿಸುವುದಿಲ್ಲವೇ ? ಅತ್ಯಾಚಾರದ ಆರೋಪ ಎದುರಿಸುತ್ತಿರುವ ಒಬ್ಬ ಶಾಸಕನ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಪಕ್ಷ ರಾಜಕಾರಣ ಬಹುಶಃ ಮುಗಿದ ಅಧ್ಯಾಯವೆನಿಸುತ್ತದೆ. ಅಧಿಕಾರ ರಾಜಕಾರಣದ ಅನಿವಾರ್ಯತೆಗಳು ರಾಜಕಾರಣದ ಅಪರಾಧೀಕರಣ ಪ್ರಕ್ರಿಯೆಗೆ ಅಧಿಕೃತವಾಗಿಯೇ ಮಾನ್ಯತೆ ನೀಡಿರುವುದನ್ನು ರಾಷ್ಟ್ರಮಟ್ಟದಲ್ಲೇ ಕಾಣುತ್ತಿದ್ದೇವೆ. ಇದಕ್ಕೆ ಬಲಿಯಾಗುತ್ತಿರುವುದು ಮಹಿಳೆ ಮತ್ತು ದಲಿತರು ಎನ್ನುವುದು ಗಮನಿಸಬೇಕಾದ ಅಂಶ.

 

ಉತ್ತರಖಾಂಡದ ಮುಖ್ಯಮಂತ್ರಿ,  ಮಹಿಳೆಯರು ಧರಿಸುವ ಹರಿದ ಜೀನ್ಸ್ ಪ್ಯಾಂಟಿನ ಬಗ್ಗೆ ಅಸಭ್ಯ ಹೇಳಿಕೆ ನೀಡುತ್ತಾ “ ಹೆಣ್ಣು ಮಕ್ಕಳು ಹರಿದ ಜೀನ್ಸ್ ತೊಟ್ಟು ಮಂಡಿ ಕಾಣುವಂತೆ ಇರುವುದರಿಂದ ಸಮಾಜ ನೈತಿಕವಾಗಿ ಕುಸಿಯುತ್ತದೆ, ಇದರಿಂದ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತದೆ ” ಎಂದು ಹೇಳಿದ್ದರು. ಪಶ್ಚಿಮ ಬಂಗಾಲದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ “ ಮಮತಾ ಬ್ಯಾನರ್ಜಿ ಸೀರೆಯುಟ್ಟು ತಮ್ಮ ಗಾಯಗೊಂಡ ಕಾಲನ್ನು ಜನರಿಗೆ ತೋರಿಸುವುದು ಬಂಗಾಲದ ಸಂಸ್ಕೃತಿಗೆ ತಕ್ಕುದಲ್ಲ, ದೀದಿ ಬರ್ಮುಡಾ ಧರಿಸಲಿ ” ಎಂದು ಆಜ್ಞಾಪಿಸುತ್ತಾರೆ.  ಕರ್ನಾಟಕದಲ್ಲಿ ಆರೋಗ್ಯ (?) ಸಚಿವ ಸುಧಾಕರ್ ರಾಜ್ಯದ 224 ಶಾಸಕರ ದಾಂಪತ್ಯ ನಿಷ್ಠೆಯನ್ನೇ ಪ್ರಶ್ನಿಸುತ್ತಾರೆ. ಈ ಎಲ್ಲ ಅಸೂಕ್ಷ್ಮ ಹೇಳಿಕೆಗಳು ಸಾಂಸ್ಕೃತಿಕ ರಾಜಕಾರಣದ ರಾಯಭಾರಿಗಳಿಂದಲೇ ವ್ಯಕ್ತವಾಗುವುದು ವಿಡಂಬನೆ ಎನಿಸಿದರೂ ಸತ್ಯ.

 

ಅತ್ಯಾಚಾರದ ಆರೋಪ ಎದುರಿಸುತ್ತಿರುವ ಒಬ್ಬ ಶಾಸಕರ ಸಮರ್ಥನೆಗೆ ಮಹಿಳೆಯರ ಒಂದು ವರ್ಗ ಟೊಂಕಕಟ್ಟಿ ನಿಲ್ಲುತ್ತದೆ. ಮತ್ತೊಂದೆಡೆ ಒಂದು ಜಾತಿಯ ಗುಂಪು ತಮ್ಮ ರಾಜಕೀಯ ನಾಯಕನ ಸಮರ್ಥನೆಗಾಗಿ ಧರಣಿ ಸತ್ಯಾಗ್ರಹ ನಡೆಸುತ್ತದೆ.  ಭಾರತೀಯ ಸಂಸ್ಕೃತಿಯ ವಾರಸುದಾರರಂತೆ ವರ್ತಿಸುವ ಒಂದು ರಾಜಕೀಯ ಪಕ್ಷ ಸಂತ್ರಸ್ತ ಮಹಿಳೆಯ ನೋವನ್ನೂ ಲೆಕ್ಕಿಸದೆ ಆಕೆಯ ಚಾರಿತ್ರ್ಯ ವಧೆ ಮಾಡಲು ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ. ಆರೋಪಿ ಶಾಸಕರನ್ನು ಚುನಾವಣಾ ಪ್ರಚಾರಕ್ಕೆ ಬರುವಂತೆ ಮುಖ್ಯಮಂತ್ರಿಯವರು ಕೋರುತ್ತಾರೆ. ಬೌದ್ಧಿಕ ಮಾಲಿನ್ಯಕ್ಕೆ ಇದಕ್ಕಿಂತಲೂ ಹೆಚ್ಚಿನ ನಿದರ್ಶನ ಬೇಕಿಲ್ಲ ಎನಿಸುತ್ತದೆ.  ಕಳೆದ ಹಲವು ದಿನಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಕರ್ನಾಟಕದ ಜನಪ್ರತಿನಿಧಿಗಳು ರಾಜಕೀಯ ಮಲಗುಂಡಿಯಲ್ಲಿ ಮಿಂದೆದ್ದು ಬಂದವರಂತೆ ಕಾಣುತ್ತಾರೆ.

 

ಭಾವರಿದೇವಿ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಧೀಶರು, ಆರೋಪಿಗಳು ಮೇಲ್ಜಾತಿಗೆ ಸೇರಿದವರಾಗಿದ್ದು ಓರ್ವ ಕೆಳಜಾತಿಯ ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಸಾಧ್ಯತೆಗಳು ಕಡಿಮೆ ಎನ್ನುವ ಅರ್ಥ ಬರುವಂತೆ ತೀರ್ಪು ನೀಡಿದ್ದರು. ಇಂದು ಇದೇ ಸಮೀಕರಣವನ್ನು ಜಾತಿಯ ನೆಲೆಯಲ್ಲಿ ಅನ್ವಯಿಸಲು ಮುಂದಾಗುವುದು ಆತ್ಮವಂಚನೆಯಲ್ಲವೇ ? ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಓರ್ವ ಶಾಸಕ, ನಿರಪರಾಧಿ ಎಂದು ಸಾಬೀತಾಗುವವರೆಗೂ ಆರೋಪಿಯಾಗಿಯೇ ಉಳಿಯುತ್ತಾನೆ. ಅನೈತಿಕ, ಅಸಭ್ಯ ನಡತೆಯ ನಾಯಕರನ್ನೂ “ ನಮ್ಮ                 ನಾಯಕ ”ಎಂದು ಸಮರ್ಥಿಸುವ ಮಟ್ಟಿಗೆ ಅಧಿಕಾರ ರಾಜಕಾರಣ ನಮ್ಮ ಮನಸುಗಳನ್ನು ಭ್ರಷ್ಟಗೊಳಿಸಿದೆ. ಹಾಗೆಯೇ ಓರ್ವ ಸಂತ್ರಸ್ತ ಮಹಿಳೆಯ ನೋವನ್ನು ಅರ್ಥಮಾಡಿಕೊಳ್ಳದಷ್ಟು ಕ್ರೌರ್ಯ, ಅಸೂಕ್ಷ್ಮತೆಯನ್ನೂ ನಮ್ಮೊಳಗೆ ತುಂಬಿದೆ. ಇದು ಚಿಂತೆಗೀಡುಮಾಡುವ ವಿಚಾರ.

 

ಅಪರಾಧ ನ್ಯಾಯ ಸಂಹಿತೆಯ ಅನುಸಾರ ನೊಂದ, ಶೋಷಿತ ಮತ್ತು ಅವಮಾನಿತ ವ್ಯಕ್ತಿಗೆ ಕಾನೂನು ರಕ್ಷಣೆ ನೀಡುವುದು ಮುಖ್ಯವಾಗುತ್ತದೆ. ನ್ಯಾಯಮೂರ್ತಿ ವರ್ಮಾ ಆಯೋಗ ಇದನ್ನೇ ಸ್ಪಷ್ಟವಾಗಿ, ನಿಖರವಾಗಿ ಹೇಳಿದೆ. ಆದರೆ ಇಂದು ಭಾರತದಲ್ಲಿ ಅತ್ಯಾಚಾರ, ದೌರ್ಜನ್ಯಕ್ಕೊಳಗಾಗುವ ಮಹಿಳೆ ನ್ಯಾಯಕ್ಕಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಥ್ರಾಸ್‍ನಂತಹ ಘಟನೆಯಲ್ಲಿ ಆರೋಪಿಗಳ ರಾಜಕೀಯ ಪ್ರಭಾವ ಆಕೆಯ ದಹನಕ್ಕೆ ಕಾರಣವಾದರೆ, ಆಂಧ್ರ ಪ್ರದೇಶದಲ್ಲಿ ವಿಚಾರಣೆಯಿಲ್ಲದೆಯೇ ಆರೋಪಿಗಳ ಎನ್ಕೌಂಟರ್ ನಡೆಸಿ ನ್ಯಾಯವನ್ನು ಕತ್ತಲಲ್ಲಿರಿಸಲಾಗುತ್ತದೆ. ಈಗ ಕರ್ನಾಟಕದಲ್ಲಿ ಓರ್ವ ನೊಂದ ಮಹಿಳೆಯ ಚಾರಿತ್ರ್ಯವಧೆಗೆ ಮುಖ್ಯವಾಹಿನಿಯ ಮಾಧ್ಯಮಗಳೇ ಮುಂದಾಗುತ್ತವೆ.

 

ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಸಿ.ಡಿ ಲೇಡಿ ಎಂದು ಕರೆಯುವಷ್ಟು ಮಟ್ಟಿಗೆ ಕನ್ನಡದ ಸುದ್ದಿಮನೆಗಳು ಭ್ರಷ್ಟವಾಗಿವೆ. ಕಳೆದ ಹಲವು ದಿನಗಳಲ್ಲಿ ಕನ್ನಡದ ಸುದ್ದಿಮನೆಗಳಿಗೆ ರಮೇಶ್ ಜಾರಕಿಹೊಳಿ ಪ್ರಕರಣ ಒಂದು ಅಶ್ಲೀಲ ಚಲನಚಿತ್ರದ ವಾಲ್ ಪೋಸ್ಟ್ ನಂತೆ ಬಳಕೆಗೆ ಬರುತ್ತಿರುವುದು ದುರಂತ. ಆರೋಪಿ ಶಾಸಕನನ್ನು ಮಹಾನಾಯಕ, ಸಾಹುಕಾರ ಎಂದು ಸಂಬೋಧಿಸುವ ಕನ್ನಡದ ಸುದ್ದಿಮನೆಗಳು, ಸಂತ್ರಸ್ತ ಮಹಿಳೆಯನ್ನು ಸಿ.ಡಿ. ಲೇಡಿ ಎಂಬ ಕ್ಷುಲ್ಲಕ ಪದದ ಮೂಲಕ ಗುರುತಿಸುತ್ತಿರುವುದು ಲಿಂಗಸೂಕ್ಷ್ಮತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಸುದ್ದಿಮನೆಯ ಸಂಪಾದಕರಿಗೆ ಮತ್ತು ನಿರೂಪಕರಿಗೆ ತಾವು ಸೂಟು ಬೂಟು ಧರಿಸಿ ಕುಳಿತಿರುವುದು ಸಾರ್ವಜನಿಕ ಶೌಚಾಲಯದಲ್ಲಿ ಅಲ್ಲ, ಒಂದು ಜವಾಬ್ದಾರಿಯುತವಾದ ಸಾರ್ವಜನಿಕ ಸಾಂಸ್ಥಿಕ ನೆಲೆಯಲ್ಲಿ ಎನ್ನುವ ಪರಿಜ್ಞಾನ ಇಲ್ಲದೆ ಹೋದರೆ ಪಬ್ಲಿಕ್, ಸುವರ್ಣ, ಟಿವಿ9, ದಿಗ್ವಿಜಯದಂತಹ ವಾಹಿನಿಗಳು ಹುಟ್ಟಿಕೊಳ್ಳುತ್ತವೆ.

 

ಕೆಲವು ಸುದ್ದಿವಾಹಕರು ಸಂತ್ರಸ್ತ ಮಹಿಳೆಯನ್ನು ಏಕವಚನದಲ್ಲಿ ಸಂಬೋಧಿಸುವುದನ್ನೂ ನೋಡುತ್ತಿದ್ದೇವೆ. ಈ ಅಧಿಕಾರವನ್ನು ಸಂಪಾದಕರಿಗೆ, ನಿರೂಪಕರಿಗೆ ಕೊಟ್ಟವರಾರು ? ಒಂದು ಸಭ್ಯ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ ಎಷ್ಟು ಮುಖ್ಯ ಎನ್ನುವ ಪರಿಜ್ಞಾನ ಸಂಪಾದಕರಿಗೆ ಇರಬೇಕಲ್ಲವೇ ? ಆಕೆಯ ಪೂರ್ವಾಪರಗಳನ್ನು ಶೋಧಿಸುವ ಅನಿವಾರ್ಯತೆ ಸುದ್ದಿಮನೆಗಳಿಗೆ ಇದೆಯೇ ? ಅಥವಾ ಆರೋಪಿ ಶಾಸಕರೊಬ್ಬರನ್ನು ಸಾಹುಕಾರ-ಮಹಾನಾಯಕ ಎಂದು ಬಿಂಬಿಸುವ ತುರ್ತು ಇದೆಯೇ ? ಅಧಿಕಾರ ರಾಜಕಾರಣ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಹಿತಾಸಕ್ತಿಯ ಸಮೀಕರಣವನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದಲ್ಲವೇ ? ಸಂತ್ರಸ್ತ ಮಹಿಳೆಯ ಆರೋಪಗಳನ್ನು ತನಿಖೆಗೊಳಪಡಿಸಿ ಸತ್ಯಾಸತ್ಯತೆಗಳನ್ನು ಬಯಲಿಗೆಳೆಯಲು ಕಾನೂನು ವ್ಯವಸ್ಥೆ ಎನ್ನುವುದೊಂದಿದೆ ಎನ್ನುವುದನ್ನೂ ಸುದ್ದಿಮನೆಗಳು  ಅರಿತಿರಬೇಕಲ್ಲವೇ ?  ತಮ್ಮ ಊಹೆಗೆ ತಕ್ಕಂತೆ ತಾವೇ ಅಂತಿಮ ತೀರ್ಪು ನೀಡುವ ಮೂಲಕ ಕನ್ನಡದ ಸುದ್ದಿಮನೆಗಳು ಸೂಕ್ಷ್ಮ ಸಂವೇದನೆಯೇ ಇಲ್ಲದ ಕ್ಷುದ್ರ ಜೀವಿಗಳಂತೆ ಕಾಣುತ್ತಿವೆ.

 

ಇಂದು ಸುದ್ದಿಮನೆಗಳು ಬಿಂಬಿಸುತ್ತಿರುವ ಸಿ.ಡಿ ರಾಜಕಾರಣ ಕೇವಲ ಒಬ್ಬ ರಾಜಕೀಯ ನಾಯಕನ ಪ್ರಶ್ನೆಯಲ್ಲ. ಇದು ಒಂದು ಸಮಾಜೋ ಸಾಂಸ್ಕೃತಿಕ ಪ್ರಶ್ನೆ. ಲಿಂಗಸೂಕ್ಷ್ಮತೆಯೇ ಇಲ್ಲದ ಒಂದು ರಾಜಕೀಯ ವ್ಯವಸ್ಥೆಯನ್ನು ನಾವು ರೂಪಿಸಿಕೊಂಡಿದ್ದೇವೆ. ಹಾಗಾಗಿಯೇ ಕರ್ನಾಟಕದ ವಿಧಾನಮಂಡಲ ಅಧಿವೇಶನದಲ್ಲಿ “ ಏಕಪತ್ನಿ ವ್ರತಸ್ಥರ ” ಪ್ರಶ್ನೆ ಮುಖ್ಯ ಚರ್ಚೆಯ ವಿಷಯವಾಗುತ್ತದೆ.  ಕನ್ನಡದ ಸುದ್ದಿಮನೆಗಳಿಗೆ ಇದು ಮಾರುಕಟ್ಟೆ ಲಾಭ ಗಳಿಸುವ ಭೂರಿ ಭೋಜನವಾಗುತ್ತದೆ. ಭಾರತೀಯ ಸಮಾಜದ ಊಳಿಗಮಾನ್ಯ ವ್ಯವಸ್ಥೆಯ ಪಿತೃಪ್ರಧಾನ ಧೋರಣೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವ ನಮ್ಮ ರಾಜಕೀಯ ವ್ಯವಸ್ಥೆ ಕರ್ನಾಟಕದ ವಿಧಾನಮಂಡಲದಲ್ಲಿ ಬೆತ್ತಲಾಗಿದೆ. ಇಲ್ಲಿ ಎಲ್ಲರೂ ಅಪರಾಧಿಗಳಾಗಿಯೇ ಕಾಣುತ್ತಾರೆ. ಒಂದು ಜವಾಬ್ದಾರಿಯುತ ಸರ್ಕಾರಕ್ಕೆ ಸಾರ್ವಜನಿಕ ಸೂಕ್ಷ್ಮತೆ ಮತ್ತು ನಾಗರಿಕ ಪ್ರಜ್ಞೆಯೂ ಇರುವುದು ಅಗತ್ಯ ಎನ್ನುವುದನ್ನು ಎಲ್ಲ ಜನಪ್ರತಿನಿಧಿಗಳೂ ಅರ್ಥಮಾಡಿಕೊಳ್ಳಬೇಕಿದೆ.

 

ರಮೇಶ್ ಜಾರಕಿಹೊಳಿಯವರನ್ನು ಅಪರಾಧಿ ಎಂದು ನಿರ್ಧರಿಸುವ ಹಕ್ಕು ನ್ಯಾಯಾಂಗಕ್ಕೆ ಮಾತ್ರವೇ ಇದೆ. ಆದರೆ ಆರೋಪಿಯಾಗಿರುವ ಅವರನ್ನು ನಿರಪರಾಧಿ ಎಂದು ಘೋಷಿಸುವ ಹಕ್ಕು ಸರ್ಕಾರಕ್ಕೂ ಇರುವುದಿಲ್ಲ. ಇದು ನ್ಯಾಯ ವ್ಯವಸ್ಥೆಯ ಸೂಕ್ಷ್ಮ ಅಂಶವಲ್ಲವೇ ? ಒಂದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಭ್ಯ ರಾಜಕಾರಣ, ಸ್ವಚ್ಚ ವ್ಯಕ್ತಿತ್ವ ಮತ್ತು ಪ್ರಾಮಾಣಿಕ ನಾಗರಿಕತೆ ಎಷ್ಟು ಮುಖ್ಯ ಎನ್ನುವುದನ್ನು ಇನ್ನಾದರೂ ನಾವು ಅರ್ಥಮಾಡಿಕೊಳ್ಳಬೇಕಿದೆ. ಅಪರಾಧದ ಸಮರ್ಥನೆಗೆ ಜಾತಿ, ಧರ್ಮ, ಲಿಂಗತ್ವ, ಪಕ್ಷ ಹೀಗೆ ಯಾವ ಅಸ್ಮಿತೆಗಳೂ ಭೂಮಿಕೆಯಾಗುವುದು ಸಮರ್ಥನೀಯವಲ್ಲ. ಈ ಸೂಕ್ಷ್ಮಗಳನ್ನು ಸಮಾಜಕ್ಕೆ ತಿಳಿಸಿಕೊಡುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಸುದ್ದಿಮನೆಗಳ ಮೇಲಿರುತ್ತದೆ.

 

ದುರಂತ ಎಂದರೆ ಕನ್ನಡ ಸುದ್ದಿಮನೆಗಳು ಅಕ್ಷರಶಃ ಗಟಾರಗಳಾಗಿವೆ. ಇಡೀ ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ನೋಡಲು ಸಾಧ್ಯವಾಗದಷ್ಟು ಅಸಭ್ಯತೆಯನ್ನು ಟಿವಿ ಪರದೆಯ ಮೇಲೆ ಕಾಣುತ್ತಿದ್ದೇವೆ. ಅಧಿಕಾರ ರಾಜಕಾರಣ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ನೆಲೆಗಳನ್ನೂ ಭ್ರಷ್ಟಗೊಳಿಸಿ, ನುಂಗಿಹಾಕುತ್ತಿರುವ ಸಂದರ್ಭದಲ್ಲಿ, ಮಾಧ್ಯಮಗಳು ತಮ್ಮನ್ನು ತಾವೇ ಕಾರ್ಪೋರೇಟ್ ಹಿತಾಸಕ್ತಿಗಳಿಗೆ ಮಾರಿಕೊಳ್ಳುವುದು ನಾಚಿಕೆಗೇಡಿನ ವಿಚಾರ. ವಿದ್ಯುನ್ಮಾನ ಮಾಧ್ಯಮ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಸಾಮಥ್ರ್ಯ ಮತ್ತು ವ್ಯಾಪ್ತಿಯನ್ನು ಹೊಂದಿರುವ ಇಂದಿನ ಪರಿಸ್ಥಿತಿಯಲ್ಲಿ ಕನ್ನಡದ ಸುದ್ದಿಮನೆಗಳು ಕನಿಷ್ಟ ಸೌಜನ್ಯ, ಸಭ್ಯತೆ ಮತ್ತು ಸೂಕ್ಷ್ಮತೆಯನ್ನು ಹೊಂದಿರಬೇಕಲ್ಲವೇ ?

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಸೂಕ್ಷ್ಮತೆ ಇಲ್ಲದಿರುವುದರಿಂದಲೇ ಲಜ್ಜೆಗೆಟ್ಟ ರಾಜಕಾರಣ ವಿಜೃಂಭಿಸುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು