ಕೇರಳ(16-01-2021): ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೇರಳ ಆರ್ಟಿಸಿ) ವ್ಯವಸ್ಥಾಪಕ ನಿರ್ದೇಶಕ ಬಿಜು ಪ್ರಭಾಕರ್ ಕಂಪೆನಿಯ ನೌಕರರ ವಿರುದ್ಧ ವಾಗ್ದಾಳಿ ನಡೆಸಿದ್ದು, 100ಕೋಟಿ ರೂ. ಕಂಪೆನಿಯ ನಿಧಿ ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ.
ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಂ.ಶ್ರೀಕುಮಾರ್ ಆಗಿದ್ದ ಸಮಯದಲ್ಲಿ 100 ಕೋಟಿ ರೂ. ಕಾಣೆಯಾಗಿದೆ ಎಂದು ಇವರು ಆರೋಪಿಸಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಐಎಎಸ್ ಅಧಿಕಾರಿ ಬಿಜು ಪ್ರಭಾಕರ್, ಕೇರಳ ಆರ್ಟಿಸಿ 7,990 ಕೋಟಿ ರೂ.ಗಿಂತ ಹೆಚ್ಚಿನ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.ಕಾರ್ಮಿಕರು ಸರಿಯಾಗಿ ಕಚೇರಿಗಳಿಗೆ ಹಾಜರಾಗುತ್ತಿಲ್ಲ ಮತ್ತು ಕೇರಳ ಆರ್ಟಿಸಿಯಲ್ಲಿ ಕೆಲಸ ಮಾಡುವ ಬದಲು ಅನೇಕರು ಕೃಷಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಅನುಸರಿಸುತ್ತಿದ್ದಾರೆ ಎಂದು ಬಿಜು ಪ್ರಭಾಕರ್ ಆರೋಪಿಸಿದರು.ಇಲಾಖೆಯ ಅನೇಕ ಖಾಯಂ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಬದಲಿಗೆ ಅವರು ಶುಂಠಿ ಮತ್ತು ಅರಿಶಿನ ಕೃಷಿ ಮಾಡುತ್ತಿದ್ದಾರೆ. ಅನೇಕ ಡಿಪೋಗಳನ್ನು ತಾತ್ಕಾಲಿಕ ಉದ್ಯೋಗಿಗಳು ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.